ಬೆಳಗಾವಿ: ಕಾರ್ಗಿಲ್ ವಿಜಯೋತ್ಸವ ಇಡೀ ದೇಶವೇ ಗರ್ವ, ಹೆಮ್ಮೆ, ಅಭಿಮಾನ ಪಡುವಂತದ್ದು. ಈ ಯುದ್ಧದಲ್ಲಿ ಗಂಡು ಮೆಟ್ಟಿದ ನಾಡು ಬೆಳಗಾವಿ ಜಿಲ್ಲೆಯ ವೀರಯೋಧರು ಕೂಡ ಭಾಗಿಯಾಗಿ ಶತ್ರುಗಳನ್ನು ಹೊಡೆದುರುಳಿಸುವ ಮೂಲಕ ತಮ್ಮ ಶೌರ್ಯ, ಸಾಹಸ ಪ್ರದರ್ಶಿಸಿದ್ದರು. ಅಲ್ಲದೇ ಹಲವು ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿ ಕೊಟ್ಟು ಹುತಾತ್ಮರಾಗಿದ್ದಾರೆ.
ಹೌದು ಜುಲೈ 26 ಬಂದರೆ ಸಾಕು ಕಾರ್ಗಿಲ್ ವಿಜಯೋತ್ಸವದ ಸಂಭ್ರಮ ಮನೆ ಮಾಡಿರುತ್ತದೆ. ಆ ಸಂಭ್ರಮಕ್ಕೆ ಕಾರಣವಾಗಿರುವ ವೀರಯೋಧರನ್ನು ಸ್ಮರಿಸಲಾಗುತ್ತದೆ. ಹೀಗೆ ಕಾರ್ಗಿಲ್ ಯುದ್ಧದಲ್ಲಿ ಬೆಳಗಾವಿ ಜಿಲ್ಲೆಯ ಐದು ಯೋಧರು ವೀರ ಮರಣವನ್ನಪ್ಪಿದರೆ, 18ಕ್ಕೂ ಹೆಚ್ಚು ಯೋಧರು ಯುದ್ಧದಲ್ಲಿ ಭಾಗಿಯಾಗಿ ಶತ್ರುಗಳ ಎದೆ ಸೀಳಿ ಪರಾಕ್ರಮ ಮೆರೆದಿದ್ದರು.
ಉಗ್ರಗಾಮಿ ಪ್ರಮುಖನನ್ನೇ ಹತ್ಯೆ ಮಾಡಿದ ಶೂರ:ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಗ್ರಾಮದ ವೀರಯೋಧ ಬಸಪ್ಪ ಮುಗಳಿಹಾಳ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಉಗ್ರರ ಮುಖಂಡ ಎಂ.ಡಿ. ಗುಜ್ಜರ್ ಸೇರಿ ಆತನ ಮೂವರು ಸಹಪಾಠಿಗಳನ್ನು ಹತ್ಯೆ ಮಾಡಿದ್ದರು. ಇನ್ನು ಉಗ್ರರ ಮುಖಂಡನ ಬಂದೂಕಿನಿಂದಲೇ ಆತನ ದೇಹವನ್ನು ಛಿದ್ರ ಛಿದ್ರ ಮಾಡಿದ್ದರು. ಈ ವೇಳೆ, ಬಸಪ್ಪ ಅವರ ಜೊತೆಗಿದ್ದ ನಾಲ್ಕು ಯೋಧರು ಹುತಾತ್ಮರಾಗಿದ್ದರು. ಆದರೆ, ಏಕಾಂಗಿಯಾಗಿ ಶತ್ರು ಸೈನ್ಯದ ನಾಲ್ವರನ್ನು ಹತ್ಯೆ ಮಾಡಿದ ಮಹತ್ಕಾರ್ಯಕ್ಕೆ ಭಾರತ ಸರ್ಕಾರ ಬಸಪ್ಪ ಮುಗಳಿಹಾಳ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಈಟಿವಿ ಭಾರತದ ಜೊತೆ ಮಾತನಾಡಿದ ಕ್ಯಾಪ್ಟನ್ ಬಸಪ್ಪ ಅವರು, ಯುದ್ಧದ ಭೀಕರತೆ ಬಿಚ್ಚಿಟ್ಟಿದ್ದಾರೆ. 28 ವರ್ಷಗಳ ಕಾಲ ದೇಶದ ಗುಜರಾತ್, ಅರುಣಾಚಲ ಪ್ರದೇಶ, ಅಸ್ಸೋಂ, ಅಮೃತಸರ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಸೇರಿ ದಕ್ಷಿಣ ಆಫ್ರಿಕಾದಲ್ಲೂ ಕೆಲಕಾಲ ಸೇವೆ ಸಲ್ಲಿಸಿರುವ ಬಸಪ್ಪ ಅವರು, ಉತ್ತರಾಖಂಡದಲ್ಲಿ ಸಿಎಪಿಟಿ ಕ್ಯಾಪ್ಟನ್ ಆಗಿ, ಒಂದೂವರೆ ವರ್ಷದ ಹಿಂದೆಯಷ್ಟೇ ನಿವೃತ್ತಿಯಾಗಿದ್ದಾರೆ.
ಜಿಲ್ಲೆಯ ಐದು ಯೋಧರು ಹುತಾತ್ಮ:ಕಾರ್ಗಿಲ್ ಯುದ್ಧದಲ್ಲಿ ಬೆಳಗಾವಿ ಜಿಲ್ಲೆಯ ಐವರು ಯೋಧರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಮುರಕಿಭಾವಿ ಗ್ರಾಮದ ಬಾಬು ಸಾಣಿಕೊಪ್ಪ, ಮೇಕಲಮರಡಿ ಗ್ರಾಮದ ಯಶವಂತ ಕೋಲಕಾರ, ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಮಡಿವಾಳಪ್ಪ ಹಡಪದ, ಬೆಳಗಾವಿಯ ವಡಗಾವಿಯ ದೊಂಡಿಬಾ ದೇಸಾಯಿ, ಅಥಣಿ ತಾಲೂಕಿನ ದರೂರ ಗ್ರಾಮದ ಬಸವರಾಜ ಚೌಗುಲಾ ಹುತಾತ್ಮ ವೀರಯೋಧರು.