ಬೆಳಗಾವಿ:ಕೋವಿಡ್ ವಿರುದ್ಧದ ಹೋರಾಟಕ್ಕೆ ಬಲ ನೀಡುವ ಲಸಿಕೆ ಹಾಕುವ ಪ್ರಕ್ರಿಯೆ ಬೆಳಗಾವಿ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಲಸಿಕೆಯ ಮೊದಲ ಡೋಸ್ ಪಡೆದ ಅನೇಕರಿಗೆ ಎರಡನೇ ಡೋಸ್ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಆದ್ರೆ ಜಿಲ್ಲೆಯಲ್ಲಿ ಲಸಿಕಾಕರಣದ ಆರಂಭದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಯಿಂದ ಪರದಾಡುತ್ತಿದ್ದ ಜಿಲ್ಲೆಯ ಜನರಿಗೀಗ ಮುಕ್ತಿ ಸಿಕ್ಕಂತಾಗಿದೆ.
ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ಲಸಿಕೆ ಪಡೆಯುವ ಪ್ರತಿಯೊಬ್ಬರ ಹೆಸರು, ವಿಳಾಸ, ಆಧಾರ್ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಸಂಗ್ರಹಿಸಿ ಅಪ್ಲೋಡ್ ಮಾಡಲಾಗುತ್ತಿದೆ. ಲಸಿಕಾಕರಣದ ಆರಂಭದಲ್ಲಿ ಮಾಹಿತಿ ಅಪ್ಲೋಡ್ ಮಾಡುವ ಆ್ಯಪ್‍ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಹಲವರು ಇತ್ತೀಚೆಗೆ ತೊಂದರೆ ಅನುಭವಿಸಿದ್ದರು.
ಗ್ರಾಮೀಣ ಭಾಗಗಳಲ್ಲಿ ನೆಟ್ ವರ್ಕ್ ಸಮಸ್ಯೆ ಸಹಜ. ಈ ಕಾರಣಕ್ಕೆ ಆರೋಗ್ಯ ಸಿಬ್ಬಂದಿ ಆಧಾರ್ ಕಾರ್ಡ್, ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಒಳಗೊಂಡ ಮಾಹಿತಿ ಪಡೆದು ಮೊದಲ ಲಸಿಕೆ ನೀಡಿದ್ದಾರೆ. ಲಸಿಕೆ ವಿತರಣೆ ಹೆಚ್ಚಾದಂತೆ ಮಾಹಿತಿ ಅಪ್ಲೋಡ್ ಮಾಡುವುದು ಕೂಡ ವಿಳಂಬವಾಗಿದೆ. ಈ ಕಾರಣಕ್ಕೆ ಲಸಿಕೆಯ ಮೊದಲ ಡೋಸ್ ಪಡೆದ ಅನೇಕರಿಗೆ ಎರಡನೇ ಡೋಸ್ ಲಸಿಕೆ ಸಿಕ್ಕಿರಲಿಲ್ಲ. ಅನೇಕ ಜನರು ತಮ್ಮ ಲಸಿಕೆಯ ಎರಡನೇ ಡೋಸ್‍ಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಜನಾಕ್ರೊಶಕ್ಕೆ ಮಣಿದ ಜಿಲ್ಲಾಡಳಿತ:
ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಜ್ ನೀಡುವ ಬಗ್ಗೆ ಸರ್ಕಾರದಿಂದಲೇ ಸಾರ್ವಜನಿಕರ ಮೊಬೈಲ್‍ಗಳಿಗೆ ಸಂದೇಶ ಬರುತ್ತದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಸಂದೇಶ ಬಂದಿರುವ ಜನರಿಗೆ ಮಾತ್ರ ಲಸಿಕೆಯ ಎರಡನೇ ಡೋಸ್ ನೀಡುವುದಾಗಿ ಹೇಳುತ್ತಿದೆ. ಆದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ಯಡವಟ್ಟಿನಿಂದಲೇ ಮೊದಲ ಡೋಸ್ ಪಡೆದ ಅನೇಕರಿಗೆ ಲಸಿಕೆಯ ಎರಡನೇ ಡೋಸ್ ಪಡೆಯುವ ಕುರಿತಾದ ಸಂದೇಶ ಬರುತ್ತಿಲ್ಲ. ಲಸಿಕೆಯ ಮೊದಲ ಡೋಸ್ ವಿತರಣೆ ವೇಳೆ ಸಂಗ್ರಹಿಸಿದ್ದ ಮಾಹಿತಿ ಸರಿಯಾಗಿ ಅಪ್ಲೋಡ್ ಮಾಡಿದ್ದರೆ ಜನರಿಗೆ ನಿಯಮಿತವಾಗಿ ಮೆಸೆಜ್ ಬರುತ್ತಿದ್ದವು. ಆದರೆ ಆರೋಗ್ಯ ಸಿಬ್ಬಂದಿಯ ಯಡವಟ್ಟಿನಿಂದ ಅನೇಕರಿಗೆ ಮೆಸೇಜ್ ಬರುತ್ತಿಲ್ಲ. ಇದರಿಂದ ಸಾರ್ವಜನಿಕರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.