ಬೆಳಗಾವಿ:ಪ್ರಚಾರ ತೆಗೆದುಕೊಳ್ಳುವುದನ್ನು ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು. ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಜಾನುವಾರುಗಳು ಸತ್ತರೆ ನೀಡುವ ಪರಿಹಾರ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಒಂದು ತಿಂಗಳಲ್ಲೇ 10,305 ಜಾನುವಾರು ಮೃತಪಟ್ಟಿವೆ. ಇವುಗಳನ್ನು ರಕ್ಷಣೆ ಮಾಡಬೇಕಿರುವುದು ನಮ್ಮ ಜವಾಬ್ದಾರಿ ಅಲ್ಲವೇ? ಎಂದು ಪ್ರಶ್ನಿಸಿದರು. ಪಶು ಚಿಕಿತ್ಸಕರು ಇಲ್ಲ, ಔಷಧ ಲಭ್ಯವಿಲ್ಲ. ಸಿಬ್ಬಂದಿ ಕೊರತೆಯನ್ನು ಸರಿಪಡಿಸಿ ಲಸಿಕೆ ಹಾಕುತ್ತಿಲ್ಲ. ಹಸು ಹಿಡಿದುಕೊಂಡು ಫೋಟೋ ತೆಗೆಸಿಕೊಂಡು ಪ್ರಚಾರಕ್ಕಾಗಿ, ರಾಜಕೀಯಕ್ಕಾಗಿ ಹಸುಗಳನ್ನು ಬಳಸಿಕೊಳ್ಳುತ್ತೀರಾ? ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಪಶು ಸಂಗೋಪನಾ ಇಲಾಖೆ ನಿರ್ದೇಶಕರು 2022 ರಲ್ಲಿ ಡಿಸೆಂಬರ್ 19 ಕ್ಕೆ 1.14 ಕೋಟಿ ಜಾನುವಾರು ಇವೆ ಎಂದು ಲಿಖಿತ ಮಾಹಿತಿ ನೀಡಿದ್ದಾರೆ. ಆದರೆ, 2019 ರ ಮಾರ್ಚ್ 25 ರಂದು 1.29 ಕೋಟಿ ಜಾನುವಾರು ಇದ್ದವು ಎಂದು ಹೇಳಿದ್ದರು. ಗೋ ಹತ್ಯೆ ನಿಷೇಧ ಕಾಯ್ದೆ ತಂದ ಮೇಲೆಯೂ 16 ಲಕ್ಷ ಜಾನುವವಾರುಗಳು ಎಲ್ಲಿ ಹೋದವು. ಇದರಿಂದ ಆಗಿರುವ ಪರಿಣಾಮಗಳೇನು ಎಂಬುದನ್ನು ಯೋಚಿಸಿದ್ದೀರಾ? ಎಂದು ಪ್ರಶ್ನಿಸಿದರು.