ಬೆಳಗಾವಿ (ಅಥಣಿ): ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಎಲ್ಲಾ ಊರುಗಳು ನಲುಗಿ ಹೋಗಿದ್ದವು. ನೆರೆ ತಗ್ಗಿದರೂ ಇನ್ನೂ ಅನೇಕ ಊರುಗಳ ಗ್ರಾಮಸ್ಥರು ಸಮಸ್ಯೆಯಿಂದ ಮುಕ್ತಿ ಕಂಡಿಲ್ಲ. ಪ್ರವಾಹ ಪೀಡಿತ ಗ್ರಾಮಗಳ ಮಕ್ಕಳು ಶಾಲೆಗೆ ಹೋಗಲು ಈಗಲೂ ಪರದಾಡುತ್ತಿದ್ದಾರೆ. ಇವೆಲ್ಲ ಕಂಡು ಬಂದಿದ್ದು ಪ್ರಭಾವಿ ಡಿಸಿಎಂ ಲಕ್ಷ್ಮಣ ಸವದಿ ಅವರ ಕ್ಷೇತ್ರವಾದ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ.
ನಡುಗಡ್ಡೆಯಂತಾದ ಹುಲಗಬಾಳಿ ಗ್ರಾಮದಲ್ಲಿ ಸಂಪೂರ್ಣ ರಸ್ತೆ ಸಂಚಾರ ಬಂದ್ ಆಗಿದೆ. ಅದರಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಪಟ್ಟಣಕ್ಕೆ ಹೋಗಬೇಕಾದ ಗ್ರಾಮಸ್ಥರು ಪ್ರಾಣ ಕೈಯಲ್ಲಿ ಹಿಡಿದೆ ಸಂಚರಿಸಬೇಕಿದೆ. ಬ್ಯಾರಲ್ನಿಂದ ತಯಾರಿಸಿ ಅಪಾಯಕಾರಿ ಚಿಕ್ಕ ತೆಪ್ಪದ ಮೂಲಕ ಇವರ ಈ ದುಸ್ಸಾಹ ನಿತ್ಯ ನಡೆಯುತ್ತಿದೆ.