ಬೆಳಗಾವಿ/ಬೆಂಗಳೂರು:ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಕುರಿತ ಚರ್ಚೆಗೆ ಉತ್ತರ ನೀಡುವಾಗ ಪ್ರಧಾನಿ ಶಿಕ್ಷಣದ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಪ್ರಧಾನಿ ಪದವನ್ನು ಕಡತದಿಂದ ತೆಗೆಯುವಂತೆ ಸಭಾಪತಿ ರೂಲಿಂಗ್ ನೀಡಿದರೂ ಸದನದಲ್ಲಿ ಕೋಲಾಹಲ ಮುಂದುವರೆದಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಕಲಾಪದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ಡಾ.ವೈ.ಎ.ನಾರಾಯಣಸ್ವಾಮಿ, ಟಿ.ಎ.ಶರವಣ, ಛಲವಾದಿ ನಾರಾಯಣಸ್ವಾಮಿ ಹಾಗೂ ಇತರರು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ರದ್ದುಗೊಳಿಸಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ತಲೆದೋರಿರುವ ಗೊಂದಲ-ಆತಂಕದ ಬಗ್ಗೆ ಪ್ರಸ್ತಾಪಿಸಿದ ವಿಷಯವಾಗಿ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, "ರಾಜ್ಯದಲ್ಲಿ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಯಾವುದೇ ರೀತಿಯ ಮೂಲಸೌಕರ್ಯ ಕಲ್ಪಿಸಿಲ್ಲ, ಬೋಧಕ ಸಿಬ್ಬಂದಿಗೆ ತರಬೇತಿ ನೀಡಲಿಲ್ಲ. ಹೊಸ ವ್ಯವಸ್ಥೆಗೆ ಒಗ್ಗುವಂತೆ ತರಬೇತಿ ನೀಡಲಿಲ್ಲ ಇದು ಆತುರದ ಮತ್ತು ಅವೈಜ್ಞಾನಿಕ ನಿರ್ಧಾರವಾಗಿದೆ. ಹಾಗಾಗಿ ನಾವು ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹೊಸ ಶಿಕ್ಷಣ ನೀತಿಯನ್ನು ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆ" ಎಂದು ಸಮರ್ಥಿಸಿಕೊಂಡರು.
"ವಿದ್ಯಾರ್ಥಿಗಳು ವ್ಯಾಸಂಗದ ನಡುವೆಯೇ ಯಾವುದೇ ವಿವಿಗೆ ಹೋಗುವ ಅವಕಾಶ ಸರಿಯಲ್ಲ, ಬೇರೆ ದೇಶದಲ್ಲಿ ಈ ವ್ಯವಸ್ಥೆ ಇದೆ ಎಂದ ಮಾತ್ರಕ್ಕೆ ಇಲ್ಲಿ ತರುವುದು ಸರಿಯಲ್ಲ. ನಮ್ಮ ಸಮಾಜದಲ್ಲಿನ ಪರಿಸ್ಥಿತಿ, ನಮ್ಮಲ್ಲಿನ ಸ್ಥಿತಿಗತಿ, ಮಕ್ಕಳ ದಕ್ಷತೆ, ಸರ್ಕಾರದ ಪರಿಸ್ಥಿತಿ ಎಲ್ಲವನ್ನೂ ಆಲೋಚನೆ ಮಾಡಬೇಕು. ವಿದೇಶದಲ್ಲಿನ ಪದ್ಧತಿ ನಮ್ಮಲ್ಲಿಗೆ ಎಲ್ಲವೂ ಸರಿ ಹೊಂದುವುದಿಲ್ಲ. ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ವ್ಯವಸ್ಥೆ ಇರಬೇಕು. ಅಲ್ಲದೆ ನೂತನ ಶಿಕ್ಷಣ ನೀತಿ ಜಾರಿಗೆ ರಚಿಸಲಾಗಿದ್ದ ಕಾರ್ಯಪಡೆ ಶಿಫಾರಸುಗಳನ್ನೂ ಕಡೆಗಣಿಸಿ ಕೇವಲ ಪಾಲಿಸಿಯನ್ನು ಮಾತ್ರ ಅನುಷ್ಠಾನಕ್ಕೆ ತಂದಿದ್ದಾರೆ" ಎಂದರು.