ಕರ್ನಾಟಕ

karnataka

ಧಾರವಾಡ-ಬೆಳಗಾವಿ ರೈಲು ಮಾರ್ಗದ ಭೂಸ್ವಾಧೀನಕ್ಕೆ ಶೀಘ್ರ ಹಣ ಬಿಡುಗಡೆ: ಸಿಎಂ

By

Published : Sep 26, 2021, 4:21 PM IST

ಇಂದು ಬೆಳಗಾವಿ ನಗರದ ಹೊರವಲಯದ ಸಾಂವಗಾಂವ ಗ್ರಾಮದಲ್ಲಿ ‌ನಡೆದ ದಿ.‌ಸುರೇಶ ಅಂಗಡಿ ಅವರ ಪುತ್ಥಳಿ ಅನಾವರಣ ಹಾಗೂ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.

ದಿ.‌ ಸುರೇಶ ಅಂಗಡಿ ಪುತ್ಥಳಿ ಅನಾವರಣ
ದಿ.‌ ಸುರೇಶ ಅಂಗಡಿ ಪುತ್ಥಳಿ ಅನಾವರಣ

ಬೆಳಗಾವಿ: ದಿ.ಸುರೇಶ ಅಂಗಡಿ ಅವರ ಕನಸಿನ ಧಾರವಾಡ-ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಬೇಕಾದ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬೆಳಗಾವಿ ಧಾರವಾಡ ರೈಲ್ವೆ ಯೋಜನೆಯ ಭೂಸ್ವಾಧೀನಕ್ಕೆ ಹಿಂದಿನ ಸಿಎಂ ಬಿಎಸ್‌ವೈ ಹಣ ಮೀಸಲಿಟ್ಟಿದ್ದರು. ಕೂಡಲೇ ಹಣ ಬಿಡುಗಡೆ ಮಾಡಿ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು. ಸುರೇಶ್ ಅಂಗಡಿ ಅವರೇ ಪ್ರಾರಂಭಿಸಿದ್ದ ಬೆಳಗಾವಿ-ಬೆಂಗಳೂರು ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲಿಗೆ ಅಂಗಡಿ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಸುರೇಶ್ ಅಂಗಡಿ ಅವರು ಅಜಾತ ಶತ್ರು. ಎಲ್ಲರ ಪ್ರೀತಿ,ವಿಶ್ವಾಸ ಗಳಿಸಿರುವ ಅಪರೂಪದ ರಾಜಕಾರಣಿ. ಅಂಗಡಿ ಅವರ ರಾಜಕೀಯ ಬೆಳವಣಿಗೆಯ ಹಿಂದೆ ಸಂಸದೆ ಮಂಗಲ ಅವರ ಬೆಂಬಲ ಇತ್ತು. ಅಂಗಡಿ ಕೇವಲ ರಾಜಕಾರಣಿ ಅಷ್ಟೇ ಆಗಿರಲಿಲ್ಲ, ಉತ್ತಮ ಉದ್ಯಮಿಯೂ ಆಗಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಬಹಳಷ್ಟು ಆಸಕ್ತಿ ಹೊಂದಿದ್ದರು. ಸುರೇಶ್ ಅಂಗಡಿ ಹಿಂದುತ್ವದ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಸಾಮರ್ಥ್ಯ ಇರುವ ವ್ಯಕ್ತಿ ಕೈಗೆ ಅಧಿಕಾರ ಕೊಟ್ಟರೆ ಅಭಿವೃದ್ಧಿ ಹೇಗೆ ಮಾಡಬಹುದು ಎಂಬುದನ್ನು ಸುರೇಶ ಅಂಗಡಿ ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ನೆನೆಗುದಿಗೆ ಬಿದ್ದಿದ್ದ ಅನೇಕ ರೈಲ್ವೆ ಯೋಜನೆಗಳನ್ನು ಅವರು ಪೂರ್ಣ ಮಾಡಿದ್ದಾರೆ. ತಮ್ಮ ಪ್ರಭಾವ ಬಳಸಿ ರಾಜ್ಯದ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಬೆಂಗಳೂರು ಸಬ್‌ಅರ್ಬನ್ ರೈಲ್ವೆ ಯೋಜನೆ ಸೇರಿ ಅನೇಕ ದೊಡ್ಡ ರೈಲ್ವೆ ಯೋಜನೆಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ ಎಂದರು.

ಸಚಿವರಾದ ಉಮೇಶ್ ಕತ್ತಿ, ಗೋವಿಂದ ಕಾರಜೋಳ, ಶಂಕರಗೌಡ ಪಾಟೀಲ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಪ್ರಭಾಕರ ಕೋರೆ, ಪ್ರಕಾಶ ಹುಕ್ಕೇರಿ ಸೇರಿ ಮತ್ತಿತರು ಉಪಸ್ಥಿತರಿದ್ದರು.

ABOUT THE AUTHOR

...view details