ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದೆ. ಇಲ್ಲಿಯವರೆಗೂ ಇಲ್ಲಿ ಯಾವುದೇ ಕೊರೊನಾ ಪಾಸಿಟಿವ್ ರೋಗಿಯನ್ನು ದಾಖಲಿಸಿಲ್ಲ.ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಉಪಯೋಗಕ್ಕೆ ಬಾರದ ಶಿರಗುಪ್ಪಿ ಕೋವಿಡ್ ಸೆಂಟರ್ ಕೊರೊನಾ ಸೋಂಕು ಹತೋಟಿಗೆ ತರಲು ಶಿರಗುಪ್ಪಿಯಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದೆ. ಈ ಕೇಂದ್ರದಲ್ಲಿ 50 ಬೆಡ್‌ಗಳ ವ್ಯವಸ್ಥೆಯೂ ಇದೆ. ಶಿರಗುಪ್ಪಿಯ ಕೋವಿಡ್ ಸೆಂಟರ್ಗೆ ಜವಳಿ ಹಾಗೂ ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ್ ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿದ್ದರು.
ಆದರೆ ಕೋವಿಡ್ ಸೆಂಟರ್ನಲ್ಲಿ ಯಾವುದೇ ಸೋಂಕಿತರನ್ನಿಟ್ಟಿಲ್ಲ ಹಾಗೂ ನೆಪ ಮಾತ್ರಕ್ಕೆ ಕೋವಿಡ್ ಸೆಂಟರ್ ತೆರೆದು, ಸರ್ಕಾರ ಹಣ ನುಂಗಲು ಮಾಡಿರುವ ಕುತಂತ್ರ ಅನ್ನೋದು ಸಾರ್ವಜನಿಕರ ಆರೋಪ.
ಕಾಗವಾಡ ತಾಲೂಕಿನಲ್ಲಿ ಈವರೆಗೆ ಪತ್ತೆಯಾದ ಸೋಂಕಿತರು ಗ್ರಾಮಗಳಲ್ಲಿ ತಿರುಗಾಡುತ್ತಿದ್ದಾರೆ. ಈಗಾಗಲೇ ಕಾಗವಾಡ ತಾಲೂಕಿನ ಕೆಲ ಸೋಂಕಿತರು ಮನೆಗಳಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಹಾಗಾದರೆ ಈ ಕೋವಿಡ್ ಕೇಂದ್ರ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ? ಈ ಕೂಡಲೇ ಕಾಗವಾಡ ತಾಲೂಕಿನ ಎಲ್ಲ ಸೋಂಕಿತರನ್ನು ಶಿರಗುಪ್ಪಿ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಿ ಅವರಿಗೆ ಸರಿಯಾದ ಚಿಕಿತ್ಸೆ ನೀಡಬೇಕು. ಇದರ ಬಗ್ಗೆ ಮೇಲಧಿಕಾರಿಗಳು ಸರಿಯಾದ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಆಗ್ರಹಿಸಿದ್ದಾರೆ.