ಬೆಳಗಾವಿ:ಕುರಿಗಳ ಮೇಲೆ ಕಾರೊಂದು ಹರಿದ ಪರಿಣಾಮ 38ಕ್ಕೂ ಹೆಚ್ಚಿನ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಉಳಿಗೇರಿ ಗ್ರಾಮದ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಕುರಿಗಾಹಿ ಯಲ್ಲಪ್ಪ ಬಿಜ್ಜನ್ನವರ್ ಎಂಬುವರಿಗೆ ಸೇರಿದ್ದ ಕುರಿಗಳು ಸಾವನ್ನಪ್ಪಿವೆ.
ಪ್ರತೀ ವರ್ಷ ಮೇವಿಗಾಗಿ ಕುರಿಗಳೊಂದಿಗೆ ವಲಸೆ ಹೋಗುತ್ತಿದ್ದರು. ಸವದತ್ತಿಯಿಂದ ಚಿಕ್ಕ ಉಳಿಗೇರ ರಸ್ತೆ ಮೂಲಕ ನರಗುಂದ ಕಡೆಗೆ ಹೋಗುವ ಸಂದಭರ್ದಲ್ಲಿ ಚಿಕ್ಕ ಉಳಿಗೇರಿ ಗ್ರಾಮದ ಬಳಿ ಆ. 23ರಂದು ಬೆಳಗಿನ ಜಾವ ಅಪಘಾತ ಸಂಭವಿಸಿದೆ.
ಕಾರು ಹರಿದು ಸಾವನಪ್ಪಿರುವ ಕುರಿಗಳು ಅಪಘಾತದಲ್ಲಿ 38 ಕುರಿಗಳು ಸಾವನ್ನಪ್ಪಿದ್ರೆ, 50ಕ್ಕೂ ಹೆಚ್ಚಿನ ಕುರಿಗಳಿಗೆ ಗಂಭೀರ ಗಾಯಗಳಾಗಿವೆ. ಒಟ್ಟಾರೆ 6 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಬದುಕಿಗೆ ಆಸರೆಯಾಗಿದ್ದ ಕುರಿಗಳ ಸಾವಿನಿಂದಾಗಿ ದಿಕ್ಕು ತೋಚದಂತಾಗಿದೆ ಎಂದು ಯಲ್ಲಪ್ಪ ಬಿಜ್ಜನ್ನವರ ಅಳಲು ತೋಡಿಕೊಂಡಿದ್ದಾರೆ.
ಅಪಘಾತ ಎಸಗಿದ ಕಾರು ಚಾಲಕ ತನ್ನ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ವಿಷಯ ತಿಳಿದ ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಅಪಘಾತ ಎಸಗಿದ ಕಾರಿನ ನಂಬರ್ ಮಲ್ಲಾಪುರ ಟೋಲ್ ನಾಕಾದಲ್ಲಿ ಲಭ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದ್ರೆ ಈ ಕುರಿತು ಪರಿಶೀಲನೆ ನಡೆಸಬೇಕಿದ್ದ ಸವದತ್ತಿ ಪೊಲೀಸರು ಮಾತ್ರ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.