ಬೆಳಗಾವಿ:ವಿಶ್ವವಿದ್ಯಾಲಯಗಳು ಇಲ್ಲದ ಜಿಲ್ಲೆಗಳಲ್ಲಿ ಆದಷ್ಟು ತ್ವರಿತವಾಗಿ ವಿವಿಗಳನ್ನು ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಲೆ ಎತ್ತಲಿರುವ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯೂ ಸೇರಿದಂತೆ ಗರಿಷ್ಠ 25 ಸಿಬ್ಬಂದಿ ಮಾತ್ರ ಇರಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ತಾಲೂಕಿನ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಆವರಣದಲ್ಲಿ ನಡೆದ ಜ್ಞಾನಯಜ್ಞ ಫೆಲೋಶಿಪ್ ವಿತರಣೆ ಮತ್ತು ವಿದ್ಯುನ್ಮಾನ ಪ್ರಮಾಣ ಪತ್ರಗಳ ಸೇವಾ ವ್ಯವಸ್ಥೆ (ಎಲೆಕ್ಟ್ರಾನಿಕ್ ಡಾಕ್ಯುಮೆಂಟರಿ ಡೆಲಿವರಿ) ಹಾಗೂ ಟ್ರ್ಯಾಕಿಂಗ್ ವ್ಯವಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ನೂರಾರು ಎಕರೆ ವಿಶಾಲವಾದ ಕ್ಯಾಂಪಸ್ಗಳು ಈಗ ಅಪ್ರಸ್ತುತವಾಗುತ್ತಿವೆ. ಆಧುನಿಕ ತಂತ್ರಜ್ಞಾನವು ಸಮರ್ಥವಾಗಿದ್ದು, ತುಂಬಾ ಕಡಿಮೆ ಜಾಗದಲ್ಲಿ ವಿವಿಗಳನ್ನು ಸ್ಥಾಪಿಸಲು ಈಗ ಸಾಧ್ಯವಿದೆ. ದೊಡ್ಡ ದೊಡ್ಡ ವಿವಿಗಳನ್ನು ಆರಂಭಿಸುವ ಬದಲು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯಗಳು ಇರುವಂತೆ ನೋಡಿಕೊಳ್ಳುವುದಕ್ಕೆ ಸರ್ಕಾರ ಆದ್ಯತೆ ಕೊಟ್ಟಿದೆ ಎಂದರು.
ಬೆಂಗಳೂರಿನಲ್ಲಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜನ್ನು (ಯುವಿಸಿಇ) ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ 10 ವರ್ಷಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.120 ಎಕರೆ ವಿಶಾಲವಾಗಿರುವ ಬೆಳಗಾವಿಯ ವಿವಿಯು ಕೂಡ ಐಐಟಿ ಮಾದರಿಯಲ್ಲೆ ಬೆಳೆಯಬೇಕು. ಈ ನಿಟ್ಟಿನಲ್ಲಿ ಕುಲಪತಿ ಪ್ರೊ. ಕರಿಸಿದ್ದಪ್ಪ ಇನ್ನು ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.