ಬೆಳಗಾವಿ:''ವಿಶ್ವವಿದ್ಯಾಲಯಗಳು ಗ್ರಾಮಗಳ ಮಟ್ಟದಲ್ಲಿಯೂ ಡಿಜಿಟಲ್ ಸಾಕ್ಷರತೆ ಅಭಿವೃದ್ದಿಗಾಗಿ ಆದ್ಯತೆ ನೀಡಬೇಕಿದೆ. ಇದರೊಂದಿಗೆ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ಚಟುವಟಿಕೆಗಳನ್ನೂ ಕೈಗೊಳ್ಳಬೇಕಿದೆ'' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದ್ದಾರೆ.
ಇಲ್ಲಿನ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ದಕ್ಷಿಣ ವಲಯ ಕುಲಪತಿಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಅವರು ಭಾಷಣ ಮಾಡಿದರು. ''ಭಾರತದ ಪ್ರಮುಖ ಉನ್ನತ ಶಿಕ್ಷಣ ಸಂಘಟನೆಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಕೂಡ ಒಂದು. ಸಂಶೋಧನೆ ಆಧಾರಿತ ಉನ್ನತ ಶಿಕ್ಷಣ ಸುಧಾರಿಸುವಲ್ಲಿ ಇದು ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದೆ. ಪ್ರತಿವರ್ಷವೂ ವಿಶೇಷ ಸಮ್ಮೇಳನ ನಡೆಯುತ್ತದೆ. ಕಾಲಕಾಲಕ್ಕೆ ಉನ್ನತ ಶಿಕ್ಷಣದ ಸವಾಲುಗಳನ್ನು ಎದುರಿಸಿ, ಅಗತ್ಯ ಮಾರ್ಗದರ್ಶನ ನೀಡುತ್ತಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
''ದೇಶದ ಹಿತಾಸಕ್ತಿ ಹಾಗೂ ಉನ್ನತ ಶಿಕ್ಷಣದಲ್ಲಿ ಡಿಜಿಟಲ್ ಟೆಕ್ನಾಲಜಿ ಅತ್ಯಂತ ಮಹತ್ವದ ಪಾತ್ರ ಹೊಂದಿದೆ. ಈ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಹೊಸ ಕ್ರಾಂತಿಯನ್ನೇ ಮಾಡಿದೆ. ಸಾಕಷ್ಟು ಸುಧಾರಣೆಗಳನ್ನು ಈಗಾಗಲೇ ಮಾಡಿದ್ದು, ಅವುಗಳು ಇನ್ನೂ ಮುಂದುವರಿಯತ್ತಿವೆ. ಉನ್ನತ ಶಿಕ್ಷಣದಲ್ಲಿ ದಕ್ಷತೆ ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಶಕ್ತಿಯನ್ನು ವೃದ್ಧಿಸಲು ಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯ ಅಗತ್ಯತೆಯಿದೆ. ಬಡಜನತೆಗೆ ಡಿಜಿಟಲ್ ಶಿಕ್ಷಣದ ಸೌಲಭ್ಯಗಳು ಕೈಗೆಟುಕುವಂತಾಗಬೇಕು. ಭಾರತದ ಆರ್ಥಿಕ ಸ್ಥಿತಿ ಹೆಚ್ಚಿಸಿ ಚೈತನ್ಯ ತಂದಿದೆ. ಇಂದಿನ ಆರ್ಥಿಕ ಶಕ್ತಿ 5ನೇ ಸ್ಥಾನದಲ್ಲಿದೆ. ಶೀಘ್ರವೇ 3ನೇ ಸ್ಥಾನದಲ್ಲಿ ಬರಲು. ಇಂದಿನ ಯುವಕರು ಸ್ವಯಂ ಉದ್ಯೋಗ ಮಾಡಬೇಕು. ಇನ್ನು ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಸಾಕಾರಗೊಳಿಸುವ ಮೂಲಕ ಸಶಕ್ತ ಭಾರತ ನಿರ್ಮಿಸಲು ಕೈಜೋಡಿಸಬೇಕು. ಪ್ರಕೃತಿ ಮತ್ತು ಸಂಸ್ಕೃತಿ ಸಂರಕ್ಷಣೆಯೂ ಆಗಬೇಕಿದೆ'' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.