ಕರ್ನಾಟಕ

karnataka

ETV Bharat / state

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿದ ರಾಜಕೀಯ ಮುಖಂಡರು - ಕೋವಿಡ್ ಸಾವು

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಚನ್ನಬಸಪ್ಪ ಅಂಗಡಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರ ಅಗಲಿಕೆಗೆ ರಾಜಕೀಯ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.

express condolences
ರಾಜಕೀಯ ಮುಖಂಡರು

By

Published : Sep 24, 2020, 4:29 AM IST

Updated : Sep 24, 2020, 11:24 AM IST

ಬೆಂಗಳೂರು: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್​ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಹಾಗೂ ಮುಖಂಡರು ಸಂತಾಪ ಸೂಚಿಸಿದ್ದಾರೆ.

ನನ್ನ ದೀರ್ಘಕಾಲದ ಆತ್ಮೀಯ ಸ್ನೇಹಿತ ಹಾಗೂ ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವರು ಆಗಿದ್ದಂತಹ ಸುರೇಶ್ ಅಂಗಡಿಯವರು ಅಕಾಲಿಕವಾಗಿ ನಿಧನರಾದಂತಹ ಸುದ್ದಿ ನನಗೆ ನಂಬಲಾಗುತ್ತಿಲ್ಲ. ನಿಜಕ್ಕೂ ಇದು ದಿಗ್ಭ್ರಮೆ ಮೂಡಿಸುವಂತಹ ದುರ್ದೈವದ ಸಂಗತಿಯಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸಂತಾಪ ವ್ಯಕ್ತಪಡಿಸಿದರು.

ಬಿಜೆಪಿಯ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದ ಸುರೇಶ್ ಅಂಗಡಿ ಅವರು ನಮ್ಮ ಬೆಳಗಾವಿಯಿಂದ ಪ್ರತಿನಿಧಿಸಿ ಇತ್ತೀಚೆಗೆ ಕೇಂದ್ರ ಸಚಿವರಾಗಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅನೇಕ ಹೊಸ ಯೋಜನೆಗಳನ್ನು, ಯೋಚನೆಗಳನ್ನು ಜಾರಿಗೊಳಿಸುವ ಮೂಲಕ ತಾವೊಬ್ಬ ಅತ್ಯಂತ ಸಮರ್ಥ ಹಾಗೂ ದೂರದರ್ಶಿತ್ವದ ನಾಯಕನಾಗುವ ಭರವಸೆಯನ್ನು ಅವರು ನಮ್ಮಲ್ಲಿ ಮೂಡಿಸಿದ್ದರು.

ಕರ್ನಾಟಕಕ್ಕಂತೂ ಅನೇಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ. ಇಂತಹ ಒಬ್ಬ ಅದಮ್ಯ ಚೇತನ ಇನ್ನಿಲ್ಲ ಎಂದು ಹೇಳಲು ನನಗೆ ನಿಜಕ್ಕೂ ತೀವ್ರ ಆಘಾತವಾಗುತ್ತಿದೆ. ದಿವಂಗತರ ಆತ್ಮಕ್ಕೆ ನಾನು ಭಗವಂತನಲ್ಲಿ ಸದ್ಗತಿಯನ್ನು ಕೋರುತ್ತೇನೆ ಮತ್ತು ಅವರ ಕುಟುಂಬವನ್ನು ಖುದ್ದಾಗಿ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಸಂತಾಪ ಸಂದೇಶದ ತಿಳಿಸಿದ್ದಾರೆ.

ಈ ಸುದ್ದಿಯಿಂದ ನನಗೆ ತೀವ್ರ ದಿಗ್ಬ್ರಮೆಯಾಗಿದೆ. ತೀವ್ರ ಆಘಾತವಾಗಿದೆ. ನಮ್ಮ ಪಕ್ಷ ಓರ್ವ ಉನ್ನತ, ಉತ್ತಮ ನಾಯಕನ್ನು ಹಾಗೂ ಅತ್ಯಂತ ನಿಷ್ಠಾವಂತ ಕಟ್ಟಾಳುವನ್ನು ಕಳೆದುಕೊಂಡಿದೆ. ಬೆಳಗಾವಿ ಮಾತ್ರವಲ್ಲದೆ ಇಡೀ ನಾಡಿನ ನೆಚ್ಚಿನ ನಾಯಕರಾಗಿದ್ದರು. ನಮಗೆ ಹಿರಿಯರಾಗಿ ಮಾರ್ಗದರ್ಶನ ಮಾಡುತ್ತಿದ್ದರು. ರಾಜಕಾರಣದಲ್ಲಿ ಅಜಾತಶತ್ರುವಾಗಿದ್ದರು. ವೈಯಕ್ತಿಕ ಜೀವನದಲ್ಲೂ ಶಿಸ್ತುಬದ್ಧರಾಗಿದ್ದರು. ಪ್ರತಿಯೊಬ್ಬರಿಗೂ ಮಾದರಿ ಎನಿಸುವಂಥ ವ್ಯಕ್ತಿತ್ವ ಹೊಂದಿದ್ದರು. ಇಂತಹ ಅಂಗಡಿಯರ ನಿಧನ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯನ್ನು ಭರಿಸುವುದು ನಮಗಾಗಲಿ, ನಮ್ಮ ಪಕ್ಷಕ್ಕಾಗಲಿ ಭರಿಸುವುದು ಕಷ್ಟ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಶೋಕ ವ್ಯಕ್ತಪಡಿಸಿದರು.

ಕಾರಜೋಳ ಸಂತಾಪ:

ಕೇವಲ‌ ಐದು ದಿನಗಳ ಹಿಂದೆ ಇನ್ನೋರ್ವ ಸಹಕಾರಿ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿಯವರನ್ನು ಕಳೆದುಕೊಂಡೊದ್ದೆವು.‌ ಇದೀಗ ಮತ್ತೊಂದು ಆಘಾತವುಂಟಾಗಿದೆ. ಸುರೇಶ್ ಅಂಗಡಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಸಹೃದಯಿಯಾಗಿದ್ದರು. 4 ಬಾರಿ ಸಂಸದರಾಗಿ ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅಭಿವೃದ್ಧಿ ಪರವಾಗಿದ್ದು, ಬಿಜೆಪಿಯ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬ ಪರಿವಾರದವರಿಗೆ ಹಾಗೂ ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಿ, ಮೃತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಡಿಸಿಎಂ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಶೋಕ ವ್ಯಕ್ತಪಡಿಸಿದ್ದಾರೆ.

ಸಚಿವ ಶ್ರೀಮಂತ ಪಾಟೀಲ ಶೋಕ:

ನನ್ನ ಆತ್ಮೀಯ ಸ್ನೇಹಿತರು ಹಾಗೂ ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಅಕಾಲಿಕವಾಗಿ ನಿಧನರಾದಂತಹ ಸುದ್ದಿಯನ್ನು ನನಗೆ ನಂಬಲಾಗುತ್ತಿಲ್ಲ. ನಿಜಕ್ಕೂ ಇದು ದಿಗ್ಭ್ರಮೆ ಮೂಡಿಸುವಂತಹ ದುರ್ದೈವದ ಸಂಗತಿಯಾಗಿದೆ ಎಂದು ರಾಜ್ಯದ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ‌ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕಕ್ಕಂತೂ ಅನೇಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ. ಇಂತಹ ಒಬ್ಬ ಅದಮ್ಯ ಚೇತನ ಇನ್ನಿಲ್ಲ ಎಂದು ಹೇಳಲು ನನಗೆ ನಿಜಕ್ಕೂ ತೀವ್ರ ಆಘಾತವಾಗುತ್ತಿದೆ. ದಿವಂಗತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಾಜ್ಯದ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ್​‌ ಅವರು ತಮ್ಮ ಫೇಸ್​​ಬುಕ್ ಪೇಜ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸಂತಾಪ:

ಟ್ವೀಟ್ ಮೂಲಕ ತಮ್ಮ ಹಾಗೂ ಸುರೇಶ್​ ಅಂಗಡಿ ಅವರ ನಡುವಿನ ಸ್ನೇಹವನ್ನು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಮರಿಸಿದ್ದಾರೆ. ಸುರೇಶ ಅಂಗಡಿ ಅವರ ನಿಧನ ನಿಜಕ್ಕೂ ನನಗೆ ಆಘಾತಕಾರಿ ಸುದ್ದಿಯಾಗಿದೆ. ನನ್ನ ಒಬ್ಬ ಅತ್ಯಂತ ಆತ್ಮೀಯ ಗೆಳೆಯ, ಯಾವಾಗಲೂ ನನ್ನ ಕಷ್ಟ ಸುಖಗಳಲ್ಲಿರುತ್ತಿದ್ದನು ಎಂದು ಸ್ಮರಿಸಿಕೊಂಡಿದ್ದಾರೆ.

1992ರಿಂದ ಪಕ್ಷದಲ್ಲಿ ಇಬ್ಬರೂ ಜೊತೆಯಾಗಿ ಇದ್ದವರು. ನಮ್ಮ ಜೀವನದಲ್ಲಿ ವಿಧಿಯ ಆಟವಾಡಿದೆ. ರೇಲ್ವೆ ಸಚಿವರಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ಮಾಡುತ್ತಿದ್ದರು ಎಂದು ಟ್ವೀಟ್ ಮಾಡಿ ಸುರೇಶ ಅಂಗಡಿ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.

ಪಕ್ಷಕ್ಕೆ ತುಂಬಲಾರದ ನಷ್ಟ: ನಳಿನ್ ಕುಮಾರ್ ಕಟೀಲ್ ಬಣ್ಣನೆ

ಸುರೇಶ್​ ಅಂಗಡಿ ಅವರ ಅಕಾಲಿಕ ನಿಧನವು ನಮ್ಮ ಪಕ್ಷಕ್ಕೆ ಅಪಾರ ನಷ್ಟವಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಬಲವರ್ಧಿಸಲು ಪ್ರಮುಖ ಶಕ್ತಿಯಾಗಿದ್ದರು ಹಾಗೂ ನನಗೆ ಮಾರ್ಗದರ್ಶಕರಾಗಿದ್ದ ಸುರೇಶ್ ಅಂಗಡಿಯವರು ದೈವಾಧೀನರಾಗಿದ್ದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.

ಕ್ಯಾ. ಗಣೇಶ್ ಕಾರ್ಣಿಕ್ ತೀವ್ರ ಸಂತಾಪ:

ಬಿಜೆಪಿಯ ಕಾರ್ಯಕರ್ತರಾಗಿ ಪಕ್ಷದ ವಿವಿಧ ಸ್ತರದ ಜವಾಬ್ದಾರಿಗಳನ್ನು ನಿರ್ವಹಿಸಿವ ಮೂಲಕ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ, ನಾಲ್ಕು ಬಾರಿ ಸಂಸದರಾಗಿ ಬೆಳಗಾವಿ ಕ್ಷೇತ್ರದಿಂದ ಚುನಾಯಿತರಾಗಿ ಕನ್ನಡ ಹಾಗೂ ಮರಾಠಿ ಭಾಷಿಕರ ವಿಶ್ವಾಸ ಸಂಪಾದಿಸಿದ್ದರು. ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ದೇಶದಲ್ಲಿ ಅದರಲ್ಲೂ ನಮ್ಮ ರಾಜ್ಯಕ್ಕೆ ರೈಲ್ವೆ ಯೋಜನೆಗಳು ಅನುಷ್ಠಾನವಾಗುವಂತೆ ಕೆಲಸ ಮಾಡುವ ಮೂಲಕ ಭರವಸೆ ಮೂಡಿಸಿದ ದಕ್ಷ ಆಡಳಿತಗಾರ ಅಂಗಡಿಯವರನ್ನು ಕಳೆದುಕೊಂಡು ನಾಡು ಬಡವಾಗಿದೆ. ನಮ್ಮ ಪಕ್ಷವು ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಕಾರ್ಯಕರ್ತ ಬಂಧುಗಳಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಪ್ರಾರ್ಥನೆ:

ಕೇಂದ್ರ ರೈಲ್ವೆ ರಾಜ್ಯ ಸಚಿವರು ಹಾಗೂ ಆತ್ಮೀಯ ಸುರೇಶ ಅಂಗಡಿ ಕೊರೊನಾ ಸೋಂಕಿನಿಂದ ನಿಧನರಾಗಿರುವ ಸುದ್ದಿ ತೀವ್ರ ದಿಗ್ಬ್ರಮೆ ಮೂಡಿಸಿದೆ‌.ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಾರ್ಥಿಸಿದ್ದಾರೆ.

ಸುರೇಶ್ ಅಂಗಡಿ ನನ್ನ ಆತ್ಮಿಯ ಸ್ನೇಹಿತ: ಜಗದೀಶ್‌ ಶೆಟ್ಟರ್

ಸತತ ನಾಲ್ಕು ಬಾರಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುರೇಶ್‌ ಅಂಗಡಿಯವರ ಜೊತೆ ನನಗೆ ಆತ್ಮೀಯ ಸ್ನೇಹವಿತ್ತು. ರಾಜಕಾರಣವನ್ನು ಹೊರತುಪಡಿಸಿದ ಅತ್ಮೀಯ ಸಂಬಂಧ ನಮ್ಮದಾಗಿತ್ತು. ಅವರ ಅಕಾಲಿಕ ಅಗಲಿಕೆ ನನಗೆ ವೈಯಕ್ತಿಯಕವಾಗಿ ಬಹಳಷ್ಟು ನೋವನ್ನು ಉಂಟುಮಾಡಿದೆ. ರಾಜ್ಯದ ಅಭಿವೃದ್ದಿಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಕಾರ್ಯಗಳಲ್ಲೂ ಅವರು ಸಹಕಾರ ನೀಡುತ್ತಿದ್ದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಕ್ಕೆ ಅನೇಕ ರೈಲ್ವೆ ಯೋಜನೆಗಳನ್ನು ತರುವಲ್ಲಿ ಹಾಗೂ ಬಾಕಿ ಇರುವ ಯೋಜನೆಗಳ ಅನುಷ್ಠಾನ್ಕಕೆ ವೇಗ ನೀಡಿದ್ದರು. ಸರಳ ಸಜ್ಜನ ಆತ್ಮೀಯ ಸ್ನೇಹಿತರನ್ನು ಕಳೆದುಕೊಂಡಿರುವುದು ಬಹಳ ದುಃಖಕರ ಸಂಗತಿಯಾಗಿದೆ ಎಂದು ರಾಜ್ಯ ಸಚಿವ ಜಗದೀಶ್‌ ಶೆಟ್ಟರ್‌ ಕಂಬನಿ ಮಿಡಿದಿದ್ದಾರೆ.

ರಾಜ್ಯಕ್ಕೆ ತುಂಬಲಾರದ ನಷ್ಟ: ಈಶ್ವರಪ್ಪ

ನಾಲ್ಕು ಬಾರಿ ಬೆಳಗಾವಿಯಿಂದ ಸಂಸದರಾಗಿದ್ದ, ನನ್ನ ಆತ್ಮೀಯ ಸ್ನೇಹಿತರೂ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ನನ್ನ ಮನಸ್ಸಿಗೆ ತುಂಬಾ ‌ನೋವುಂಟಾಗಿದೆ. ಅಂಗಡಿ ಅವರ ಅಗಲಿಕೆ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ:

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸೌಮ್ಯ ಸ್ವಭಾವದ ಸಜ್ಜನ ಮತ್ತು ಸರಳ ರಾಜಕಾರಣಿ ಆಗಿದ್ದ ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿಯವರ ಅಕಾಲಿಕ ಮರಣ ರಾಜ್ಯಕ್ಕೆ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಶ್ರೀ ಕಾಲಭೈರವೇಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಬಸನಗೌಡ ಪಾಟೀಲ್ ಸಂತಾಪ:

ಕರ್ನಾಟಕ ಕಂಡ ಕ್ರಿಯಾಶೀಲ ಸಂಸದ, ಕೇಂದ್ರ ರೈಲ್ವೆ ಸಹಾಯಕ ಸಚಿವರಾಗಿ ಕರ್ನಾಟಕಕ್ಕೆ ಅತ್ಯುತ್ತಮ ರೈಲ್ವೆ ಯೋಜನೆಗಳನ್ನು ನೀಡಿದ್ದ ಸಹೋದರ ಸಮಾನರಾಗಿದ್ದ, ಸುರೇಶ ಅಂಗಡಿಯವರ ನಿಧನ ನನ್ನನ್ನು ದಿಗ್ಭ್ರಮೆಗೊಳಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ್(ಯತ್ನಾಳ್​) ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

ಬಸನಗೌಡ ಪಾಟೀಲ್ ಟ್ವೀಟ್

ಶಾಸಕ ಅಮೃತ ದೇಸಾಯಿ ಶೋಕ:

ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಅಧಿಕಾರವಹಿಸಿಕೊಂಡ ನಂತರ ಸುರೇಶ ಅಂಗಡಿಯವರು ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಕೀರ್ತಿಗೆ ಪಾತ್ರರಾಗಿದ್ದರು. ಬಹುದಿನಗಳ ಮಹತ್ವಾಕಾಂಕ್ಷೆಯ ಧಾರವಾಡ- ಬೆಳಗಾವಿ ನೇರ ರೈಲು ಯೋಜನೆಗೆ ವಿಶೇಷ ಆಸಕ್ತಿ ತೋರಿಸಿದ್ದರು. ನಮ್ಮಂತ ಕಿರಿಯ ಶಾಸಕರಿಗೆ ಸಚಿವ ಅಂಗಡಿಯವರು ನಿರಂತರ ಮಾರ್ಗದರ್ಶಕರಾಗಿದ್ದರು. ಸಚಿವ ಸುರೇಶ ಅಂಗಡಿಯವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಶಾಸಕ ಅಮೃತ ದೇಸಾಯಿ ಪ್ರಾರ್ಥಿಸಿದ್ದಾರೆ.

ಕಂಬನಿ ಮಿಡಿದ ಬೆಳಗಾವಿ ನಾಯಕರು:

ಅಗಲಿದ ನಾಯಕನಿಗೆ ಬೆಳಗಾವಿ ಜಿಲ್ಲೆಯ ರಾಜಕೀಯ ಮುಖಂಡರು ಕೂಡ ತಮ್ಮ ಸಂತಾಪ ಸೂಚಿಸಿದ್ದಾರೆ. ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಕೆಪಿಸಿಸಿ ವಕ್ತಾರೆಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಕೂಡ ಶೋಕ ವ್ಯಕ್ತಪಡಿಸಿದ್ದಾರೆ.

ಆರೋಗ್ಯವಾಗಿದ್ದ ಸುರೇಶ ಅಂಗಡಿ ಅವರು ದಿಢೀರ್ ನಿಧನ ಹೊಂದಿದ್ದು ದಿಗ್ಭ್ರಮೆ ಮೂಡಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಸುರೇಶ ಅಂಗಡಿ ಅವರ ಪಾತ್ರ ಮಹತ್ವದಾಗಿದೆ. ಅವರ ಅರ್ಹತೆಗೆ ರೈಲ್ವೆ ಇಲಾಖೆ ಖಾತೆ ಸಿಕ್ಕ ಬಳಿಕ ಈ ಭಾಗದ ರೈಲ್ವೆ ಯೋಜನೆಗಳು ಆರಂಭವಾಗಿದ್ದವು ಎಂದು ಬಿಜೆಪಿ ನಾಯಕರು ಅಂಗಡಿಯವರ ಸೇವೆಯನ್ನು ಸ್ಮರಿಸಿಸಿದ್ದಾರೆ.

Last Updated : Sep 24, 2020, 11:24 AM IST

ABOUT THE AUTHOR

...view details