ಬೆಳಗಾವಿ: ಮೇ ತಿಂಗಳ 3 ರ ಬಳಿಕ ಕೇಂದ್ರ ಸರ್ಕಾರ ಕೈಗೊಳ್ಳಲಿರುವ ತೀರ್ಮಾನ ಹಾಗೂ ಮಾರ್ಗಸೂಚಿ ಆಧರಿಸಿ ಕೈಗಾರಿಕೆಗಳನ್ನು ಆರಂಭಿಸಲು ಅನುವು ಮಾಡಿ ಕೊಡಲಾಗುವುದು ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ ನೀಡಿದರು.
ನಗರದ ಉದ್ಯಮಭಾಗದ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೇ 3 ಕ್ಕೆ ಲಾಕ್‍ಡೌನ್ ಮುಗಿದ ಬಳಿಕ ನಮಗೆ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂದು ಕೈಗಾರಿಕೋದ್ಯಮಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದರು. ಮುಂಬರುವ ದಿನಗಳಲ್ಲಿ ಕಾರ್ಮಿಕರು-ಕೈಗಾರಿಕೋದ್ಯಮಿಗಳು ಮತ್ತು ಉತ್ಪಾದನೆ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮಾತನಾಡಿದ ಕೈಗಾರಿಕೋದ್ಯಮಿಗಳು, ಕೊರೊನಾ ಭೀತಿಯಿಂದ ಕಾರ್ಮಿಕರು ತಮ್ಮ ತಮ್ಮ ಊರು ಹಾಗೂ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ಒಮ್ಮೆ ಹೀಗೆ ಕಾರ್ಮಿಕರು ಹೋದರೆ ನಂತರದ ದಿನಗಳಲ್ಲಿ ತಕ್ಷಣವೇ ಕೈಗಾರಿಕೆ ಪುನರಾರಂಭಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೈಗಾರಿಕೆ ಆರಂಭಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೈಗಾರಿಕೆಗಳನ್ನು ಆರಂಭಿಸಲು ತಾವು ಸಿದ್ಧರಿದ್ದು, ಕಾರ್ಮಿಕರಿಗೆ ಪಾಸ್ ಮತ್ತು ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಪೂರೈಸಬೇಕು ಎಂದು ಕೋರಿದರು. ಸೋಂಕು ಪತ್ತೆಯಾಗಿರುವ ಪ್ರದೇಶದಿಂದ ಕೈಗಾರಿಕೆಗಳು ದೂರದಲ್ಲಿವೆ. ಆದ್ದರಿಂದ ಕೈಗಾರಿಕೆಗಳು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಕೈಗಾರಿಕೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ಕಾರ್ಮಿಕರ ಆರೋಗ್ಯ, ಊಟ-ವಸತಿ ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ಆಯಾ ಕೈಗಾರಿಕೋದ್ಯಮಿಗಳ ಹೊಣೆಯಾಗಿರಲಿದೆ ಎಂದು ಸಚಿವರು ವಿವರಿಸಿದರು.