ಬೆಳಗಾವಿ:ಇಟಲಿಯಿಂದ ಬಂದಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಭಾರತ ಪೌರತ್ವ ನೀಡಿದೆ. ಇದನ್ನು ಸೋನಿಯಾ ಅವರು ಎಂದೂ ಮರೆಯಬಾರದು ಎಂದು ಸಿಎಎ ವಿರೋಧಿಸುತ್ತಿರುವ ಕಾಂಗ್ರೆಸ್‌ಗೆ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಬೆಳಗಾವಿಯ ಸರ್ದಾರ್ ಮೈದಾನದಲ್ಲಿಸಿಎಎಕುರಿತಾದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಭಾರತ ಪೌರತ್ವ ನೀಡಿರುವುದನ್ನು ಸೋನಿಯಾ ಗಾಂಧಿ ಮರೆಯಬಾರದು. ರಾಹುಲ್ ಗಾಂಧಿ ಕೇವಲ ಸುಳ್ಳು ಮಾತನಾಡುತ್ತಿದ್ದಾರೆ. 70 ವರ್ಷ ಕಾಂಗ್ರೆಸ್ನಿಂದ ಆಗದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ದೌರ್ಜನಕ್ಕೆ ಒಳಗಾದವರು, ಅಸಹಾಯಕ ಹಿಂದೂಗಳಿಗೆ ರಕ್ಷಣೆಗೆ ಭಾರತ ಮುಂದಾಗಿದೆ. ದೌರ್ಜನ್ಯ, ಹಿಂಸೆಗೆ ಒಳಗಾದಹಿಂದೂಗಳಿಗೆಭಾರತದಲ್ಲಿ ಪೌರತ್ವ ನೀಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ ಎಂದರು.
ಪೌರತ್ವ ಬಯಸಿದ್ದ ಹಿಂದುಗಳಿಗೆ ಸೋನಿಯಾ ಗಾಂಧಿ ಪೌರತ್ವ ನೀಡಲಿಲ್ಲ. ಸೋನಿಯಾ ಗಾಂಧಿ ಇಟಲಿಯಿಂದ ಬಂದವರು. ಆದರೂ ಭಾರತ ದೇಶ ಸೋನಿಯಾ ಗಾಂಧಿ ಅವರಿಗೆ ಪೌರತ್ವ ನೀಡಿದೆ. ಆದ್ರೆ ಸೋನಿಯಾ ಈಗ ಮೌನಿ ಬಾಬರಂತೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಹಿಂದೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾತುಗಳನ್ನು ಹೇಳುತ್ತಿದ್ದಾರೆ. ದೇಶದ ಯಾವುದೇ ಮುಸ್ಲಿಂ ಬಾಂಧವರ ಪೌರತ್ವ ಕಸಿದುಕೊಳ್ಳುವ ಕಾಯ್ದೆ ಇದಲ್ಲ. ರಾಹುಲ್ ಗಾಂಧಿಗೆ ಜನರ ಮುಂದೆ ಮುಖ ತೋರಿಸಲು ಆಗುತ್ತಿಲ್ಲ. ಅದಕ್ಕಾಗಿ ಮುಖ ಮುಚ್ಚಿಕೊಂಡು ವಿದೇಶದಲ್ಲಿ ರಾಹುಲ್ ಓಡಾಡುತ್ತಿದ್ದಾರೆ ಎಂದು ಅನುರಾಗ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳು ಕಾಂಗ್ರೆಸ್‌ಗೆ ಜೀರ್ಣ ಆಗುತ್ತಿಲ್ಲ. ದೇಶದ ಜನ ನರೇಂದ್ರ ಮೋದಿಗೆ ಆಶೀರ್ವಾದ ನೀಡಿದ್ದಾರೆ. ಕಾಶ್ಮೀರದಲ್ಲಿ 370 ರದ್ದು, ರಾಮಮಂದಿರ ವಿವಾದ ಇತ್ಯರ್ಥ, ಪೌರತ್ವ ತಿದ್ದುಪಡಿ ಕಾಯ್ದೆ 6 ತಿಂಗಳಲ್ಲಿ ಜಾರಿಯಾಗಿವೆ. ತ್ರಿವಳಿ ತಲಾಖ್ ಕಾನೂನು ರದ್ದು ಮಾಡಿ ಮುಸ್ಲಿಂ ಅಕ್ಕ-ತಂಗಿಯರಿಗೆ ಅನುಕೂಲ ಮಾಡಿಕೊಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ 72 ವರ್ಷಗಳಿಂದ ನಿಮಗೆ ತರಲಾಗಲಿಲ್ಲ. ಪಾಕ್, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಹಿಂದೂ ಬಾಂಧವರಿಗಾಗಿ ಪೌರತ್ವ ನೀಡಲು ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುತ್ತಿದ್ದಾರೆ ಎಂದರು.
ಅಲ್ಲದೇ ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರ ನಡೆಯುತ್ತಿತ್ತು. ಹಿಂದೂಗಳ ಮತಾಂತರಕ್ಕೆ ಹುನ್ನಾರ ನಡೆಯುತ್ತಿತ್ತು. ಪಾಕಿಸ್ತಾನದ ಅಲ್ಪಸಂಖ್ಯಾತರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ವಿಭಜನೆ ಸಂದರ್ಭದಲ್ಲಿ ಪಾಕ್‌ನಲ್ಲಿ 23 ಪರ್ಸೆಂಟ್ ಇದ್ದ ಹಿಂದೂಗಳಿಂದು ಕೇವಲ ಮೂರು ಪರ್ಸೆಂಟ್ ಕುಸಿದಿದೆ. ಇಷ್ಟಾದರೂ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಪಾಕ್ ಪರ ಧ್ವನಿ ಎತ್ತುತ್ತಾರೆ. ನರೇಂದ್ರ ಮೋದಿ, ಅಮಿತ್ ಷಾ ಭಾರತ ಪರ ಧ್ವನಿ ಎತ್ತುತ್ತಾರೆ. ಈ ಹಿಂದೆ ವಿದೇಶದಿಂದ ಬಂದವರಿಗೆ ಪೌರತ್ವ ನೀಡಿದ್ರೆ ಯಾರು ವಿರೋಧಿಸಲಿಲ್ಲ. ಹೊರ ದೇಶದ ಹಿಂದೂ ಗಳಿಗೆ ಪೌರತ್ವ ನೀಡಿದ್ರೆ ವಿರೋಧಿಸುತ್ತಿರುವುದೇಕೆ? ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಕೊಡುವ ಕಾಯ್ದೆ, ಕಿತ್ತುಕೊಳ್ಳುವ ಕಾಯ್ದೆ ಅಲ್ಲ. ನಮ್ಮ ದೇಶದ ಮುಸ್ಲಿಂ ಬಾಂಧವರಿಗೆ ಈ ಕಾಯ್ದೆಯಿಂದ ತೊಂದರೆ ಇಲ್ಲ. ನಮ್ಮ ದೇಶದ ಮುಸಲ್ಮಾನ ಬಾಂಧವರ ಪೌರತ್ವ ಕಿತ್ತುಕೊಳ್ಳುವ ಕಾನೂನು ಇದಲ್ಲ. ಪೌರತ್ವ ಕಿತ್ತುಕೊಳ್ಳಲಾಗುತ್ತೆ ಎಂದು ರಾಹುಲ್ ಗಾಂಧಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.