ಬೆಳಗಾವಿಯಲ್ಲಿ ಅಮಿತ್ ಶಾ ಸಭೆ ಬೆಳಗಾವಿ:ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬರುವ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಾಗಿ ರಾಜ್ಯ ನಾಯಕರು ಮತ್ತು ಬೆಳಗಾವಿ ನಾಯಕರೊಂದಿಗೆ ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ರಾತ್ರಿ ಉನ್ನತ ಮಟ್ಟದ ಸಭೆ ನಡೆಸಿದರು. ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಪಕ್ಷದ ಜಿಲ್ಲೆಯ ನಾಯಕರ ಜೊತೆ ಅವರು ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದರು.
ಬೆಳಗಾವಿ ಬಿಜೆಪಿ ನಾಯಕರ ಪ್ರತ್ಯೇಕ ಸಭೆ:ಬೆಳಗಾವಿ ಬಿಜೆಪಿ ನಾಯಕ ಲಕ್ಷ್ಮಣ್ ಸವದಿ ಹಾಗೂ ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆ ಅವರೊಂದಿಗೆ ಅಮಿತ್ ಶಾ ಪ್ರತ್ಯೇಕ ಸಭೆ ನಡೆಸಿ, ಒಗ್ಗಟ್ಟಿನಿಂದ ಇರುವಂತೆ ಹಾಗೂ ಪಕ್ಷ ಸಂಘಟನೆ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಕೆಲವು ನಾಯಕರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಬೆಳಗಾವಿ ಬಿಜೆಪಿ ನಾಯಕರಿಗೆ ಟಾಸ್ಕ್ ನೀಡಿದ್ದು, ಇದರಲ್ಲಿ ಗೆಲುವು ಸಾಧಿಸುವಂತೆ ಶಾ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದೇ ವೇಳೆ ರಾಜ್ಯ ನಾಯಕರು, ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ನಾಯಕರೊಂದಿಗೂ ಸಭೆ ನಡೆಸಿದರು. ಮಾಜಿ ಸಿಎಂ ಬಿಎಸ್‌ವೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಎಲ್ಲ ಹಾಲಿ ಶಾಸಕರು, ಸಂಸದರು, ಎಂಎಲ್ಸಿಗಳು ಭಾಗಿಯಾಗಿದ್ದರು. ಸಭೆ ಬಳಿಕ ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ತೆರಳಿದರು.
ಸಭೆ ಬಳಿಕ ಬಿಎಸ್‌ವೈ ಹೇಳಿದ್ದೇನು?: "ಬೆಳಗಾವಿಯಲ್ಲಿ ಬಿಜೆಪಿ ಪರ ಅಲೆ ಇದೆ. ಬೆಳಿಗ್ಗೆಯಿಂದ ನೋಡಿದ ಎಲ್ಲ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿವೆ. ನನಗೆ ಸಮಾಧಾನ ಆಗಿದೆ, ತೃಪ್ತಿಯಾಗಿದೆ ಅಂತಾ ಅಮಿತ್ ಶಾ ಕೂಡ ಸಂತಪ ವ್ಯಕ್ತಪಡಿಸಿದ್ದಾರೆ" ಎಂದು ಅಮಿತ್ ಶಾ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
"ಬೆಳಗಾವಿಯಲ್ಲಿ ನಾವು ಪ್ರಯತ್ನ ಮಾಡಿದ್ರೆ 18ಕ್ಕೆ 18 ಸೀಟ್ ಗೆಲ್ಲುವ ಸಾಧ್ಯತೆ ಇದೆ. ಈಗ 13 ಸೀಟ್ ಗೆದ್ದಿದ್ದು ಎಲ್ಲರೂ ಪ್ರಯತ್ನ ಮಾಡಿ ಬೆಳಗಾವಿ ಎಲ್ಲ ಸೀಟ್ ಗೆಲ್ಲಬೇಕು. ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಸೀಟ್ ಗೆಲ್ಲುವುದರ ಮೂಲಕ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ನವರು ತಿರುಕನ ಕನಸು ಕಾಣುತ್ತಿದ್ದಾರೆ. ಅದ್ಯಾವುದು ನನಸಾಗಲ್ಲ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಆ ದಿಕ್ಕಿನಲ್ಲಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕೆಂದು ಅಮಿತ್ ಶಾ ಅವರು ಸೂಚನೆ ಕೊಟ್ಟು ಹೋಗಿದ್ದಾರೆ. ಎಲ್ಲರೂ ಕೂಡ ತಲೆಬಾಗಿ ಒಪ್ಪಿಕೊಂಡಿದ್ದೇವೆ. ರಾಜ್ಯದಲ್ಲಿ ಎಲ್ಲ ಕಡೆ ಅಮಿತ್ ಶಾ ಪ್ರವಾಸ ಮಾಡಲಿದ್ದಾರೆ. ಇನ್ನೊಂದು ತಿಂಗಳಲ್ಲಿ ನನಗೆ 80 ವರ್ಷ ಆಗುತ್ತದೆ. ಆದರೂ ಚುನಾವಣೆ ಮುಗಿಯುವವರೆಗೂ ಮನೆ ಸೇರುವುದಿಲ್ಲ. ಹಗಲು ರಾತ್ರಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯ ನಾಯಕರಲ್ಲಿ ಯಾವುದೇ ಭಿನ್ನಮತ ಇಲ್ಲ. ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಲಿದ್ದೇವೆ" ಎಂದು ಬಿಎಸ್‌ವೈ ಹೇಳಿದರು.
ಬಾಸ್ನ ನಂಬಿ ಬಿಜೆಪಿಗೆ ಬಂದಿದ್ದೇನೆ?: "ಯಡಿಯೂರಪ್ಪ ಹೇಳಿದ ಪ್ರತಿ ಶಬ್ದವೇ ನಮ್ಮ ಮಾತು ಕೂಡ. ಜಿಲ್ಲೆಯ 18 ಕ್ಷೇತ್ರಗಳಲ್ಲಿ ಕನಿಷ್ಠ 15 ಕ್ಷೇತ್ರ ಗೆಲ್ಲಲು ಅಮಿತ್ ಶಾ ಸಲಹೆ ಕೊಟ್ಟಿದ್ದಾರೆ. ಅವರು ಹೇಳಿದ ಸಲಹೆಯಂತೆ ನಾವು ಕೆಲಸ ಮಾಡ್ತೇವೆ" ಎಂದು ಸಭೆಯ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಭಿನ್ನಮತ ಮರೆತು ಸಭೆಗೆ ಹಾಜರ್: "ನಮ್ಮ ಬಾಸ್ ಅಮಿತ್ ಶಾ ಬಂದಾಗ ಗೈರಾಗಲು ಯಾರಿಗಾದರೂ ಧೈರ್ಯ ಇದೆಯಾ? ಅವರನ್ನು ನಂಬಿಯೇ ಪಕ್ಷಕ್ಕೆ ಬಂದಿದ್ದೇವೆ, ಅವರಿಂದ ಒಳ್ಳೆಯದಾಗುತ್ತೆ. ಭಾನುವಾರ ಗೋಕಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಇದೆ" ಎಂದು ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟು ಪೂರ್ಣ ಪ್ರಮಾಣದ ಸರ್ಕಾರದ ರಚನೆಗೆ ಅವಕಾಶ ಕೊಡಿ: ಅಮಿತ್ ಶಾ
ಫೆ.1ರಿಂದ ಬೆಳಗಾವಿಯಲ್ಲಿ ಉತ್ತಮ ಬೆಳವಣಿಗೆ:ಅಮಿತ್ ಶಾ ಅವರುಬೆಳಗಾವಿಗೆ ಆಗಮಿಸಿ ನಾಯಕರ ಜೊತೆ ಸಭೆ ಮಾಡಿದ್ದು ಒಳ್ಳೆಯದಾಗಿದೆ. ಎಲ್ಲರೂ ಒಟ್ಟಾಗಿ ಕನಿಷ್ಠ 15 ಸ್ಥಾನ ಗೆಲ್ಲುವುದಕ್ಕೆ ಸೂಚನೆ ನೀಡಿದ್ದಾರೆ. ಅಮಿತ್ ಶಾ ಎಲ್ಲಾ ನಾಯಕರ ಮಾತುಗಳನ್ನು ಕೇಳಿ ಎಲ್ಲರಿಗೂ ಸಂದೇಶ ನೀಡಿದ್ದಾರೆ. ನಾವೂ ಒಗ್ಗಟ್ಟಾಗಿ ಇರುತ್ತೇವೆ. ಫೆಬ್ರವರಿ 1ರಿಂದ ಬೆಳಗಾವಿಯಲ್ಲಿ ಒಳ್ಳೆಯ ಬೆಳವಣಿಗೆ ಪ್ರಾರಂಭವಾಗುತ್ತದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.