ಬೆಳಗಾವಿ: ಪತ್ನಿ ಮೃತಪಟ್ಟಿದ್ದರಿಂದ ಮನನೊಂದ ಪತಿ ಮತ್ತು ತಾಯಿ ಇಲ್ಲದ ನೆನಪಿನಲ್ಲಿ ಕೊರಗಿ ಮಗಳು ನೀರಿನ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಪ್ರತ್ಯೇಕ ಘಟನೆ ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಕಪಿಲೇಶ್ವರ ಮಂದಿರದ ನೀರಿನ ಹೊಂಡದಲ್ಲಿ ಇಂದು ಬೆಳಗ್ಗೆ ತೇಲಾಡುತ್ತಿದ್ದ ಎರಡು ಶವಗಳ ಗುರುತು ಪತ್ತೆಯಾಗಿದ್ದು, ಬೆಳಗಾವಿಯ ಕಾಂಗಲೆ ಗಲ್ಲಿಯ ನಿವಾಸಿ ವಿಜಯ್ ಪವಾರ್ (58), ಶಹಾಪುರದ ದಾನೆ ಗಲ್ಲಿಯ ಚಿತ್ರಲೇಖಾ ಶ್ರೀಕಾಂತ ಸಫಾರ್ (70) ಎಂದು ಗುರುತಿಸಲಾಗಿದೆ. ಕಪಿಲೇಶ್ವರ ಮಂದಿರದ ನೀರಿನ ಹೊಂಡದಲ್ಲಿ ಜೋಡಿ ಶವಗಳು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಖಡೇಬಜಾರ್ ಪೊಲೀಸರು ಎರಡು ಶವಗಳನ್ನು ಹೊಂಡದಿಂದ ಹೊರತೆಗೆದು ತನಿಖೆಗೆ ಒಳಪಡಿಸಿದ್ದರು.
ಜೋಡಿ ಶವಗಳು ಪತ್ತೆಯಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಬೇರೆ ಬೇರೆ ಕಾರಣಕ್ಕೆ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಗೊತ್ತಾಗಿದೆ. ತಾಯಿ ನಿಧನದಿಂದ ಏಕಾಂಗಿಯಾಗಿ, ಖಿನ್ನತೆಗೆ ಒಳಗಾಗಿದ್ದ ಚಿತ್ರಲೇಖಾ ಸಫಾರ್ ಮಾನಸಿಕವಾಗಿ ಅಸ್ವಸ್ಥವಾಗಿದ್ದರು. ತಾಯಿ ನೆನಪಿನಲ್ಲಿ ಕೊರಗಿ ಕೊನೆಗೆ ಚಿತ್ರಲೇಖಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ, ಮೃತ ವ್ಯಕ್ತಿ ವಿಜಯ್ ಪವಾರ್ ತಮ್ಮ ಪತ್ನಿ ತೀರಿ ಹೋಗಿದ್ದರಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಮನೆ ಬಿಟ್ಟು ಹೋಗಿದ್ದ ವಿಜಯ ಇಂದು ಬೆಳಗ್ಗೆ ಕಪಿಲೇಶ್ವರ ಹೊಂಡದಲ್ಲಿ ಹೆಣವಾಗಿ ಪತ್ತೆಯಾಗಿದ್ದರು.