ಬೆಳಗಾವಿ: ರಾಜ್ಯದಲ್ಲಿ ಶೇ 23 ರಷ್ಟಿರುವ ಅರಣ್ಯ ಪ್ರದೇಶವನ್ನು ಮುಂಬರುವ ಒಂದೂವರೆ ವರ್ಷಗಳ ಅವಧಿಯಲ್ಲಿ ಶೇ 33ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.
ನಗರದ ಅರಣ್ಯ ಸಂರಕ್ಷಣಾ ಇಲಾಖೆಯ ಕಚೇರಿಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಸಿಸಿಎಫ್ಗಳ ಸಭೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಉಮೇಶ ಕತ್ತಿ ಮಾತನಾಡಿದರು. ಬೆಂಗಳೂರಿನಲ್ಲಿ ಸಭೆ ನಡೆಸಿದಾಗ ಅರಣ್ಯ ಇಲಾಖೆ ಬಗ್ಗೆ ಕೆಲವು ಮಾಹಿತಿಗಳು ಗಮನಕ್ಕೆ ಬಂದಿವೆ. ಹೀಗಾಗಿ ರಾಜ್ಯದ ವಿಭಾಗ ಮಟ್ಟದಲ್ಲಿರುವ ಎಲ್ಲಾ ಸಿಸಿಎಫ್ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತೇನೆ. ಬೆಳಗಾವಿ ಸಿಸಿಎಫ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಕಲಬುರಗಿ, ಮೈಸೂರು, ಮಂಗಳೂರು ಸೇರಿದಂತೆ ಇತರೆ ಕಡೆಗೂ ಸಭೆಗಳನ್ನು ನಡೆಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಉಮೇಶ ಕತ್ತಿ ಬೆಳಗಾವಿ ಸಿಸಿಎಫ್ ವ್ಯಾಪ್ತಿಯಲ್ಲಿ ಏನೇನು ಬೆಳೆಯಬೇಕು. ಏನೆಲ್ಲ ಬೆಳೆಯಬಹುದು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಬೆಳಗಾವಿ ವಿಭಾಗ ಮಟ್ಟದ ಅರಣ್ಯ ಇಲಾಖೆ ವ್ಯಾಪ್ತಿಗಳಲ್ಲಿ ಒಳಪಟ್ಟ ಸಲಾಯಿನ್ ಜಮೀನು ಎಷ್ಟಿದೆ, ಅದಕ್ಕೆ ಏನೇನು ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಎಂಬುದರ ಕುರಿತು ಸಭೆ ನಡೆಸಿದ್ದೇನೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅರಣ್ಯ ಬೆಳೆಸುವುದರ ಜೊತೆಗೆ ರೈತರಿಗೂ ಅನುಕೂಲ ಮಾಡಬೇಕೆಂಬ ದೃಷ್ಟಿಯಿಂದ ರಾಜ್ಯದ ಎಲ್ಲಾ ಕಡೆ ಸಭೆಗಳನ್ನು ನಡೆಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಇದಲ್ಲದೇ, ರಾಜ್ಯದಲ್ಲಿ ಶೇ 23 ರಷ್ಟು ಅರಣ್ಯ ಪ್ರದೇಶವಿದೆ. ನಾನು ಅಧಿಕಾರ ವಹಿಸಿಕೊಂಡು ಹತ್ತು ದಿನಗಳಾಗಿದ್ದು, ಅರಣ್ಯ ಇಲಾಖೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಮುಂಬರುವ ಒಂದೂವರೆ ವರ್ಷಗಳ ಕಾಲ ನಾನು ಅರಣ್ಯ ಸಚಿವನಾಗಿ ಮುಂದುವರೆದರೆ ಶೇ23 ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ33ಕ್ಕೆ ಏರಿಕೆ ಮಾಡುತ್ತೇನೆ. ವನ್ಯಜೀವಿಗಳನ್ನು ಬೇಟೆಯಾಡುವ ಕಳ್ಳರನ್ನು ಹತೋಟಿಗೆ ತರಲು ವಿಚಕ್ಷಣ ದಳವನ್ನು ನೇಮಿಸಿ ನಿಯಂತ್ರಣ ಮಾಡುತ್ತಿದ್ದೇವೆ. ವನ್ಯಜೀವಿಗಳ ಬೇಟೆ ಶೇ 60ರಷ್ಟು ಕಡಿಮೆ ಆಗಿದೆ ಎಂದರು.