ಬೆಳಗಾವಿ:ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ಜನವಿರೋಧಿ ಆಡಳಿತಕ್ಕೆ ಬೇಸತ್ತು ಕರ್ನಾಟಕ ರಾಜ್ಯದ ಜನರೇ ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಹೊಡೆಯುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಸಚಿವ ಉಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಆಡಳಿತ ನೋಡಿಕೊಂಡು ಕಾಂಗ್ರೆಸ್ ನಾಯಕರು ಸುಮ್ಮನಿರುವುದೇಕೆ? ಸಿದ್ದರಾಮಯ್ಯ ಕೂಡ ಸಿಎಂ ಆಗಿ ಕೆಲಸ ಮಾಡಿದವರು. ಜೆಡಿಎಸ್ಗೆ ನೀಡಿರುವ ಬೆಂಬಲವನ್ನು ಸಿದ್ದರಾಮಯ್ಯ ಹಿಂಪಡೆಯಬೇಕು. ಇಲ್ಲವಾದ್ರೆ, ರಾಜ್ಯದ ಜನತೆ ಕೈ-ದಳ ನಾಯಕರನ್ನು ಹೊಡೆಯುವ ಕಾಲ ದೂರವಿಲ್ಲ. ಹೆಚ್ಚಿನ ಸ್ಥಾನ ಪಡೆದು ಅಧಿಕಾರ ಹಿಡಿಯದ ನಮಗೂ ಜನರು ಹೊಡೆಯುತ್ತಾರೆ ಎಂದು ಅವರು ಆತ್ಮಾವಲೋಕನ ಮಾಡಿಕೊಂಡರು.
ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರಕ್ಕೆ ಜೀವ ಇಲ್ಲ. ಎಚ್ಡಿಕೆ ಜನವಿರೋಧಿ ಸರ್ಕಾರದ ನೇತೃತ್ವ ವಹಿಸಿದ್ದಾರೆ. ಮೈತ್ರಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದೆ. ಈವರೆಗೂ ರಾಜ್ಯದ ರೈತರ ಸಾಲಮನ್ನಾ ಆಗಿಲ್ಲ. ರೈತರಿಗೆ ಸುಳ್ಳು ಹೇಳಿ ಸರ್ಕಾರ ನಡೆಸುವುದು ಸರಿಯಲ್ಲ. ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಾಳಬೇಕು. ಒಳ್ಳೆಯ ಸರ್ಕಾರ ಕೊಡಲಾಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆ ಸಿಎಂ ಎಚ್ಡಿಕೆಯನ್ನು ಆಗ್ರಹಿಸಿದರು.