ಬೆಳಗಾವಿ :ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ ಹಿನ್ನೆಲೆ ಬೆಲ್ಲದ ಬಾಗೇವಾಡಿ ಗ್ರಾಮದ ಉಮೇಶ ಕತ್ತಿ ಅವರ ತಂದೆ- ತಾಯಿ ಸಮಾಧಿ ಪಕ್ಕದಲ್ಲಿಯೇ ಉಮೇಶ ಕತ್ತಿ ಅಂತ್ಯಕ್ರಿಯೆಗೆ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಮಹಾ ಸ್ವಾಮೀಜಿ ಸ್ಥಳ ನಿಗದಿ ಮಾಡಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಉಮೇಶ ಕತ್ತಿ ಒಡೆತನದ ತೋಟದಲ್ಲಿ ತಂದೆ ವಿಶ್ವನಾಥ ಕತ್ತಿ ಹಾಗೂ ತಾಯಿ ರಾಜೇಶ್ವರಿ ಕತ್ತಿ ಸಮಾಧಿ ಪಕ್ಕದಲ್ಲೇ ಉಮೇಶ ಅಂತ್ಯಕ್ರಿಯೆ ನೆರವೇರಿಸಲಗುತ್ತಿದೆ. ಸದ್ಯ ತಂದೆ ಸಮಾಧಿ ಪಕ್ಕದಲ್ಲಿರುವ ತೋಟದಲ್ಲಿ ಬೆಳೆದ ಕಬ್ಬನ್ನು ನೂರಾರು ಜನ ಸೇರಿ ರೈತರು ಕಟಾವು ಮಾಡುತ್ತಿದ್ದಾರೆ. ಅಂತ್ಯಕ್ರಿಯೆ ಸ್ಥಳಕ್ಕೆ ತೆರಳಲು ಜೆಸಿಬಿ ಬಳಸಿ ರಸ್ತೆ ನಿರ್ಮಾಣ ಕೂಡ ಮಾಡಲಾಗುತ್ತಿದೆ. ಸ್ಥಳದಲ್ಲೇ ಬೆಳಗಾವಿ, ಚಿಕ್ಕೋಡಿ ಎಸಿ ರವೀಂದ್ರ ಕರಿಲಿಂಗಣ್ಣವರ, ಸಂತೋಷ ಕಾಮಗೌಡರ ಸಿದ್ಧತೆ ಪರಿಶೀಲನೆ ನಡೆಸುತ್ತಿದ್ದಾರೆ.
ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆಗೆ ಸ್ಥಳ ನಿಗದಿ ಮಾಡಿದ ಶಿವಾನಂದ ಮಹಾ ಸ್ವಾಮೀಜಿ ಬೆಳಗಾವಿ ಏರಪೋರ್ಟ್ ನಿಂದ ಸ್ವಗ್ರಾಮ ಬೆಲ್ಲದ ಬಾಗೇವಾಡಿವರೆಗೆ ಮೆರವಣಿಗೆ:ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮಿಲಿಟರಿ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲು ಸಿದ್ದತೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ನೇರವಾಗಿ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಬರುವ ಪಾರ್ಥಿವ ಶರೀರವನ್ನು ಬಾಗೇವಾಡಿ ಗ್ರಾಮದ ಹೊರವಲಯದಲ್ಲಿ ವಿಶ್ವರಾಜ್ ಶುಗರ್ಸ್ ಕಾರ್ಖಾನೆ ಆವರಣಕ್ಕೆ ಆಗಮಿಸಲಿದೆ. ಬಳಿಕ 4ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಬಳಿಕ ಸಂಜೆ 5ಗಂಟೆಗೆ ಅಂತ್ಯಕ್ರಿಯೆ, ತಂದೆ -ತಾಯಿ ಸಮಾಧಿ ಪಕ್ಕದಲ್ಲಿ ನೆರವೇರಲಿದೆ.
ಬಾಲ್ಯದಲ್ಲಿ ತುಂಟರಾಗಿದ್ದ ಉಮೇಶ ಕತ್ತಿ :ಚಿಕ್ಕಂದಿನಿಂದಲೂ ಶಾಲೆಯಲ್ಲಿ ಉಮೇಶ ಕತ್ತಿ ತುಂಟರಾಗಿದ್ದರು. ತಮ್ಮ ಸಹಪಾಠಿ ಹುಡುಗರನ್ನು, ಹುಡುಗಿಯರನ್ನು ಉಮೇಶ ಕತ್ತಿ ಕಾಡಿಸುತ್ತಿದ್ದರು. ಮನೆಯಲ್ಲಿನ ರೊಕ್ಕ ಕಳ್ಳತನ ಮಾಡಿ ಇಸ್ಪೀಟು ಆಡುತ್ತಿದ್ದರು. ಶಾಲೆಯಲ್ಲಿ ಗುರುಗಳು ಕೇಳಿದ ಪ್ರಶ್ನೆಗಳಿಗೆ ತಕ್ಷಣದ ಉತ್ತರವನ್ನು ಉಮೇಶ್ ಕತ್ತಿ ಕೊಡುತ್ತಿದ್ದರು. ನೇರವಾಗಿ ಮಾತನಾಡುತ್ತಿದ್ದರು, ಮೊದಲು ಹೇಗೆ ಇದ್ದರೋ ಈಗಲೂ ಹಾಗೇ ಇದ್ದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದ ಉಮೇಶ್ ಕತ್ತಿ ಅವರ ಬಾಲ್ಯದ ಗೆಳೆಯ ಆನಂದ ಸ್ಮರಿಸಿದರು.
ಇದನ್ನೂ ಓದಿ :ಸಚಿವ ಉಮೇಶ್ ಕತ್ತಿ ನಿಧನಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಸಂತಾಪ