ಬೆಳಗಾವಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಉಡುಪಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ಸಿಬ್ಬಂದಿ ಸಂತೋಷ್ ಪಾಟೀಲ್ ನಿರ್ವಹಿಸಿದ್ದರು ಎನ್ನಲಾದ ರಸ್ತೆ-ಚರಂಡಿ ಸೇರಿ ಇನ್ನಿತರ 108 ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಕರಣದ ತನಿಖೆಗಾಗಿ ಉಡುಪಿ ಪೊಲೀಸರು ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಮನೆಗೆ ಭೇಟಿ ನೀಡಿದ್ದಾರೆ. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ಅವರು ನಾಗೇಶ್ ಮನ್ನೋಳಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಾಗೇಶ್ ಮನ್ನೋಳ್ಕರ್ ನಿವಾಸ ಹಿಂಡಲಗಾದ ಲಕ್ಷ್ಮೀ ನಗರದಲ್ಲಿದೆ. ಸಂತೋಷ್ ಪಾಟೀಲ್ ಮಾಡಿದ್ದಾರೆ ಎನ್ನಲಾದ 108 ಕಾಮಗಾರಿಗಳ ಬಗ್ಗೆ ಖಾಕಿ ಪಡೆ ಮಾಹಿತಿ ಪಡೆಯುತ್ತಿದೆ. ಎರಡು ದಿನಗಳಿಂದ ನಾಗೇಶ್ ಮನ್ನೋಳ್ಕರ್ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಅಲ್ಲದೇ ಉಡುಪಿ ಪೊಲೀಸರು ಬೆಳಗಾವಿಗೆ ದೌಡಾಯಿಸುತ್ತಿದ್ದಂತೆ ನಾಗೇಶ್ ಗ್ರಾಮ ಪಂಚಾಯಿತಿ ಕಡೆಗೂ ಸುಳಿದಿರಲಿಲ್ಲ. ಹೀಗಾಗಿ ಇಂದು ದಿಢೀರ್ ಮನೆಗೆ ಭೇಟಿ ನೀಡಿದ ಪೊಲೀಸರು ನಾಗೇಶ್ ಮನ್ನೋಳಕರ್ ಹೇಳಿಕೆ ಪಡೆಯುತ್ತಿದ್ದಾರೆ.