ಚಿಕ್ಕೋಡಿ : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿದೆ. ಅದರಂತೆ ಇಲ್ಲೊಬ್ಬ ಬಾಲಕನ ಜ್ಞಾಪಕಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಿಂದ ಪ್ರಶಸ್ತಿ ದೊರೆತಿದೆ. ಅಂದಹಾಗೆ ಇದು ಅಥಣಿಯ ಪುಟಾಣಿಯ ಸಾಧನೆ. 2 ವರ್ಷ 9 ತಿಂಗಳಿನ ಸ್ಕಂದ ಗುರುರಾಜ ಮಳಸಿದ್ದನವರ ಎಂಬ ಬಾಲಕ ವಾಹನ, ಬಣ್ಣ, ಸಂಕೇತಗಳನ್ನು ಗುರುತಿಸುವುದು, ರೈಮ್ಸ್, ಶ್ಲೋಕ ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿ ಚಿಕ್ಕ ವಯಸ್ಸಿನಲ್ಲೇ ಪ್ರತಿಷ್ಟಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾನೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ನಿವಾಸಿಗಳಾದ ಗುರುರಾಜ ಹಾಗೂ ಸುಶ್ಮೀತಾ ಎಂಬ ಸಾಫ್ಟ್ವೇರ್ ಇಂಜಿನಿಯರ್ ದಂಪತಿಯ ಮಗ ಸ್ಕಂದ ಮಳಸಿದ್ದನವರ 18 ವಾಹನಗಳು, 10 ಬಣ್ಣಗಳು, 06 ಡ್ರೈಫ್ರೂಟ್ಸ್, 13 ಪ್ರಾಣಿಗಳು, 07 ರಾಷ್ಟ್ರೀಯ ಸಂಕೇತಗಳು, 09 ಶ್ಲೋಕಗಳು, 15 ರೈಮ್ಸ್, ವಾರದ ದಿನಗಳು, ತಿಂಗಳುಗಳು, ಎಬಿಸಿಡಿ ಹಾಗೂ ಶಬ್ದಗಳು, ಮಹಾಭಾರತ ಹಾಗೂ ರಾಮಾಯಣದ ಪಾತ್ರಗಳನ್ನು ಸುಲಲಿತವಾಗಿ ಹೇಳಬಲ್ಲ.
ತಾಯಿ ಸುಶ್ಮೀತಾ ಮಾತನಾಡಿ, "ಚಿಕ್ಕ ವಯಸ್ಸಿನಲ್ಲೇ ಮಗುವಿನಲ್ಲಿ ವಿಶೇಷ ಜ್ಞಾಪಕ ಶಕ್ತಿಯನ್ನು ನಾವು ಗಮನಿಸಿದ್ದೆವು. ಒಮ್ಮೆ ಹೇಳಿದ ಕತೆಗಳು, ಶ್ಲೋಕಗಳನ್ನು ಅವನು ಮರು ಉಚ್ಚಾರಣೆ ಮಾಡುತ್ತಿದ್ದ. ಇದರಿಂದಾಗಿ ನಾವು ಆತನ ಬುದ್ಧಿಶಕ್ತಿ ನೋಡಿ ಮಹಾಭಾರತ, ರಾಮಾಯಣ, ಶ್ಲೋಕಗಳು, ಕನ್ನಡ ವರ್ಣಮಾಲೆ, ಎಬಿಸಿಡಿ ಕಲಿಸುತ್ತಿದ್ದೆವು. ಅವನು ಅದನ್ನು ನೆನಪಿಟ್ಟುಕೊಂಡು ಮರಳಿ ನಮಗೆ ಹೇಳುತ್ತಿದ್ದ. ಹೊರಹೋದಾಗಲೆಲ್ಲ ಅವನಿಗೆ ಪರಿಸರದ ಬಗ್ಗೆ ಹೇಳಿಕೊಡುತ್ತಿದ್ದೇವೆ. ನಮ್ಮ ಮನೆಯಲ್ಲಿ ಟಿವಿ ಇಲ್ಲ. ಬಾಲಕನಿಗೆ ಎಲ್ಲರ ಜೊತೆ ಸೇರಿ ಜ್ಞಾಪಕಶಕ್ತಿ ಹೆಚ್ಚಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ನಾವು ಅಪ್ಲೈ ಮಾಡಿದ್ದೆವು. ಈಗ ಪ್ರಶಸ್ತಿ ದೊರೆತಿದೆ" ಎಂದು ಹೇಳಿದರು.