ಬೆಳಗಾವಿ:ಖಾನಾಪುರದಿಂದ ರಾಮನಗರಕ್ಕೆ ತೆರಳುತ್ತಿದ್ದ ಬಸ್ ಕಿಕ್ಕಿರಿದು ತುಂಬಿದ ಪರಿಣಾಮ ಉಸಿರುಗಟ್ಟಿ ಇಬ್ಬರು ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ ಖಾನಾಪುರ ಪಟ್ಟಣದಲ್ಲಿ ನಡೆದಿದೆ.
ಬಸ್ನಲ್ಲೇ ಇಬ್ಬರು ವಿದ್ಯಾರ್ಥಿನಿಯರು ಕುಸಿದ ಬಿದ್ದ ಹಿನ್ನೆಲೆಯಲ್ಲಿ ತಕ್ಷಣವೇ ಬಸ್ ನಿಲ್ಲಿಸಲಾಗಿದೆ. ನಂತರ ಸ್ಥಳೀಯರ ಸಹಕಾರದಿಂದ ಅವರನ್ನು ಖಾನಾಪುರ ತಾಲೂಕಾಸ್ಪತ್ರೆಗೆ ರವಾನಿಸಲಾಯಿತು. ರಾಮನಗರ-ಖಾನಾಪುರ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಧೂಳಿನ ಸಮಸ್ಯೆಯಿಂದ ಪಾರಾಗಲು ಎಲ್ಲರೂ ಬಸ್ಸಿನ ಕಿಟಕಿಯನ್ನು ಮುಚ್ಚಿದ್ದಾರೆ. ಈ ವೇಳೆ ಬಸ್ನಲ್ಲಿ ಉಸಿರಾಡಲು ಕಷ್ಟವಾಗಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಘಟನೆಯಿಂದ ವಿದ್ಯಾರ್ಥಿನಿಯರ ಪೋಷಕರು ಹಾಗೂ ಕಾಲೇಜು ಸಿಬ್ಬಂದಿ ತಕ್ಷಣವೇ ತಾಲೂಕಾಸ್ಪತ್ರೆಗೆ ಆಗಮಿಸಿದ್ದಾರೆ.
ಇದನ್ನು ಓದಿ: ಸ್ಫೋಟದ ಸ್ಥಳಕ್ಕೆ ತಡರಾತ್ರಿ ಸಚಿವ ಮುರುಗೇಶ್ ನಿರಾಣಿ ಭೇಟಿ, ಪರಿಶೀಲನೆ
ಖಾನಾಪುರ-ಲೋಂಡಾ ಮಾರ್ಗ ಮಧ್ಯೆ ಬಸ್ ಕೊರತೆ ಇದೆ. ಹೀಗಾಗಿ ಲೋಂಡಾ ಗ್ರಾಮದಿಂದ ಖಾನಾಪುರ ಕಾಲೇಜಿಗೆ ಬರುವ 70 ಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ಪರದಾಡುವ ಸ್ಥಿತಿ ಇದೆ. ಸಾರಿಗೆ ಸಚಿವರ ತವರು ಜಿಲ್ಲೆಯಲ್ಲೇ ಸೂಕ್ತ ಬಸ್ ಸೌಲಭ್ಯ ಇಲ್ಲದಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಆಸ್ಪತ್ರೆ ಎದುರು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಬಂದ ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಎದುರು ಅಳಲು ತೋಡಿಕೊಂಡರು. ಕೂಡಲೇ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕರೆಸಿದ ಅವರು ಬಸ್ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ಸೂಚಿಸಿದರು.