ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಐದು ಜನರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದ್ದು, ಒಂದು ನೆಗೆಟಿವ್ ಬಂದಿದೆ. ಮತ್ತೊಂದು ವರದಿ ತಿರಸ್ಕೃತಗೊಂಡಿರುವುದರಿಂದ ಅದನ್ನು ನೆಗೆಟಿವ್ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯೋಗಾಲಯಕ್ಕೆ ಕಳಿಸಲಾದ ವರದಿಗಳ ಪೈಕಿ ಒಂದು ಮಾದರಿಯನ್ನು ಪರೀಕ್ಷೆಗೆ ಪರಿಗಣಿಸಿಲ್ಲ. ಒಂದು ನೆಗೆಟಿವ್ ಬಂದಿರುತ್ತದೆ. ಆದ್ದರಿಂದ ಐದು ಮಾದರಿಗಳ ಪೈಕಿ ಎರಡು ಮಾದರಿಗಳು ನೆಗೆಟಿವ್ ಎಂದು ಅಧಿಕೃತ ಪ್ರಕಟಿಸಲಾಗಿದೆ. ಇನ್ನುಳಿದ ಮೂರು ಮಾದರಿಗಳ ವರದಿ ನಿರೀಕ್ಷಿಸಲಾಗಿದೆ. ಹೊಸದಾಗಿ ಮತ್ತೊಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ ಎಂದು ತಿಳಿಸಿದರು.
144 ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ:ಈಗಾಗಲೇ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು , ಒಟ್ಟಾಗಿ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಆದೇಶ ಉಲ್ಲಂಘಿಸುವುದು ಕಂಡು ಬಂದರೆ, ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಗೆ ಒಟ್ಟು 229 ಜನರು ವಿದೇಶದಿಂದ ಆಗಮಿಸಿದ್ದು, ಇದರಲ್ಲಿ194 ಜನರು ಗೃಹ ಕ್ವಾರಂಟೈನ್ನಲ್ಲಿದ್ದಾರೆ. ಸುಮಾರು 34 ಜನರು 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.ಇಬ್ಬರು ಐಸೋಲೇಷನ್ ವಾರ್ಡ್ನಲ್ಲಿದ್ದು, ಗಂಟಲು ದ್ರವ ಮಾದರಿ ಕಳಿಸಲಾದ ವ್ಯಕ್ತಿಗಳು ಆರೋಗ್ಯವಾಗಿದ್ದಾರೆ. ವಸತಿ ನಿಲಯ ಹಾಗೂ ಖಾಸಗಿ ಹೋಟೆಲ್ ಸೇರಿದಂತೆ ಸುಮಾರು 200 ಹಾಸಿಗೆಗಳನ್ನು ಕ್ವಾರಂಟೈನ್ಗೆ ಸಿದ್ಧಪಡಿಸಲಾಗಿದೆ. ಸರ್ಕಾರ ಹೊಸ ನಿಬಂಧನೆಗಳನ್ನು ಪಾಲಿಸಲು ಕ್ರಮಕೈಗೊಳ್ಳಲಾಗಿದೆ. ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಂತರ್ ಜಿಲ್ಲಾ ಗಡಿಯಲ್ಲೂ ತಪಾಸಣೆ:ಬೆಳಗಾವಿ ಜಿಲ್ಲೆಯ ನೆರೆ ಹೊರೆಯ ಗಡಿಯಲ್ಲಿ ಕೂಡ ಆರೋಗ್ಯ ಇಲಾಖೆಯ ತಂಡಗಳನ್ನು ನಿಯೋಜಿಸಿ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ನೆರೆಯ ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಗಡಿಯಲ್ಲಿ ಪ್ರವೇಶಿಸುವ ಸಣ್ಣ ಪ್ರಯಾಣಿಕರ ವಾಹನಗಳಲ್ಲಿರುವ ಜನರ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.