ಬೆಳಗಾವಿ: ಬೆಳಗಾವಿಯಿಂದ ರಾಜ್ಯೋತ್ಸವ ಮುಗಿಸಿಕೊಂಡು ಮರಳುತ್ತಿದ್ದಾಗ ಪಾದಚಾರಿಗಳಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತು. ಮೃತರನ್ನು ಧಾರವಾಡ ಜಿಲ್ಲೆಯ ನರೇಂದ್ರದ ಲಬೈಕ್ ಹಲಸಿಗರ ಹಾಗೂ ಬೆಳಗಾವಿ ತಾಲ್ಲೂಕಿನ ಬಾಳೇಕುಂದ್ರಿ ಗ್ರಾಮದ ಶ್ರೀನಾಥ ಗುಜನಾಳ ಎಂದು ಗುರುತಿಸಲಾಗಿದೆ. ಧಾರವಾಡ ನಗರದ ಅಲ್ತಾಫ್ ನಾಲಬಂದ ಹಾಗೂ ಕಡತನ ಬಾಗೇವಾಡಿಯ ಅರ್ಜುನ ರಂಗಣ್ಣವರ ತೀವ್ರವಾಗಿ ಗಾಯಗೊಂಡ ಯುವಕರು. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ 300 ಮೀಟರ್ ದೂರದಲ್ಲಿ ದೊರೆತಿದೆ.
ಇಬ್ಬರು ಯುವಕರು ಬೈಕ್ನಲ್ಲಿ ವೇಗವಾಗಿ ಸಂಚರಿಸುತ್ತಿದ್ದರು. ಹೆದ್ದಾರಿ ಪಕ್ಕದ ಹೋಟೆಲ್‌ನಲ್ಲಿ ಊಟ ಮಾಡಿದ ನಂತರ ಹೆದ್ದಾರಿ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಪಾದಚಾರಿಗಳಿಗೆ ಬೈಕ್ ಗುದ್ದಿದೆ. ಬೈಕ್ ಸವಾರ ಹಾಗೂ ಪಾದಚಾರಿ ಮೃತಪಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಕಿತ್ತೂರು ಪೊಲೀಸರು ತಿಳಿಸಿದ್ದಾರೆ.