ಬೆಳಗಾವಿ: ಬೀದಿ ನಾಯಿಗಳಿಗೆ ತೊಂದರೆ ಕೊಡುವುದಲ್ಲದೆ ಅವುಗಳಿಗೆ ಉಚಿತವಾಗಿ ಆಹಾರ ಕೊಡುತ್ತಿರುವ ಕುಟುಂಬದವರಿಗೆ ವಕೀಲರೊಬ್ಬರು ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಆರೋಪ ನಗರದಲ್ಲಿ ಕೇಳಿಬಂದಿದೆ. ಆದರೆ, ಬೆಳಗಾವಿ ಪೊಲೀಸರು ಕ್ರಮಕೈಗೊಳ್ಳದ ಹಿನ್ನೆಲೆ ಸಂತ್ರಸ್ತರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿಯ ಖಾಸಭಾಗನ ಮಾರುತಿ ಗಲ್ಲಿಯ ನಿವಾಸಿ ಅನಿತಾ ದೊಡ್ಡಮನಿ ಕುಟುಂಬಸ್ಥರ ಮೇಲೆ ವಕೀಲ ವಿನಾಯಕ ವಲೇಪೂರಕರ ಎಂಬುವವರು ಮಾನಸಿಕ ಹಿಂಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಪ್ರಕರಣ ಹಿನ್ನೆಲೆ: ಅನಿತಾ ದೊಡ್ಡಮನಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬಾವಾ ಬೆಳಗಾವಿ ಅನಿಮಲ್ ವೇಲ್ಫೇರ್ ಅಸೋಸಿಯೇಷನ್ (ಎನ್ಜಿಓ) ತೆಗೆದುಕೊಂಡು ಸರ್ಕಾರದ ಅನುಮತಿ ಪಡೆದುಕೊಂಡು ನಗರದಲ್ಲಿರುವ ಬೀದಿ ನಾಯಿಗಳಿಗೆ ಉಚಿತವಾಗಿ ಊಟ ಹಾಕುತ್ತಿದ್ದಾರೆ. ಆದ್ರೆ, ಬೀದಿ ನಾಯಿಗಳಿಗೆ ಊಟ ಹಾಕದಂತೆ ಅನಿತಾ ಕುಟುಂಬಸ್ಥರಿಗೆ ವಕೀಲ ವಿನಾಯಕ ಎಂಬುವವರು ದಬ್ಬಾಳಿಕೆ ಮಾಡುತ್ತಿದ್ದಾರಂತೆ. ಹೀಗಾಗಿ ಅವರು ಕಳೆದ ಒಂಬತ್ತು ತಿಂಗಳ ಹಿಂದೆಯೇ ಶಾಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಂತೆ.
ಶ್ವಾನ ಪ್ರಿಯರಾದ ಅನಿತಾ ದೊಡ್ಡಮನಿ ಮಾತನಾಡಿದರು ಆದರೆ ನಾಯಿಗಳಿಗೆ ತೊಂದರೆ ಜೊತೆಗೆ ನಮಗೂ ಮಾನಸಿಕ ಹಿಂಸೆ ನೀಡುತ್ತಿದ್ದರೂ ಸಂಬಂಧಿಸಿದ ಪೊಲೀಸರು ಸೂಕ್ತಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ನೊಂದ ಕುಟುಂಬಸ್ಥರು ಆರೋಪಿಸಿದ್ದಾರೆ. ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಪ್ರಧಾನಮಂತ್ರಿ ಅವರಿಗೂ ದೂರು ಸಲ್ಲಿಸಿದ್ದೇವೆ ಎಂದು ಅನಿತಾ ಮಾಹಿತಿ ನೀಡಿದ್ದಾರೆ. ಹೀಗಾಗಿ ನಾಯಿಗಳಿಗೆ ಹಾಗೂ ನಮಗೆ ಕಿರುಕುಳ ನೀಡುತ್ತಿರುವ ವಿನಾಯಕ ಎಂಬುವವರ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಓದಿ:ಉತ್ತರಕನ್ನಡದಲ್ಲಿ ಬೀದಿ ನಾಯಿ ಕಾಟ: 6 ಸಾವಿರಕ್ಕೂ ಹೆಚ್ಚು ಜನರ ಮೇಲೆ ಶ್ವಾನಗಳ ದಾಳಿ