ಚಿಕ್ಕೋಡಿ : ಲಾಕ್ಡೌನ್ ಹಿನ್ನೆಲೆ ಗಡಿ ಪ್ರದೇಶದಲ್ಲಿ ವಿವಿಧೆಡೆ ವಿವಿಧ ಕಾರಣಗಳಿಂದ ಮೃತಪಟ್ಟ ಮೂವರನ್ನು ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್ಪೋಸ್ಟ್ನಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಬೈಲಹೊಂಗಲದ ವ್ಯಕ್ತಿಯೊಬ್ಬ ನಿನ್ನೆ ಮಹಾರಾಷ್ಟ್ರದ ಥಾಣೆಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತದೇಹವನ್ನು ರಾಜ್ಯದೊಳಗೆ ತರಲು ಅವಕಾಶವಿಲ್ಲದ ಹಿನ್ನೆಲೆ ಕುಟುಂಬಸ್ಥರು ಶವವನ್ನು ಗಡಿಯಲ್ಲಿರುವ ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಸಿಬ್ಬಂದಿ ಸಹಾಯದಿಂದ ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೈಲಹೊಂಗಲದ ಲಿಂಗರಾಜ ಬೆಳಗಾವಿ (54) ಮುಂಬೈನಲ್ಲಿ ಇಂಜಿನಿಯರಾಗಿ ಕೆಲಸ ನಿರ್ವಹಿಸುತ್ತಿದ್ದು, ಇದೇ ಮೇ.27ರಂದು ಥಾಣೆ ನಗರದ ಬಳಿ ವಾಹನ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ನಂತರ ಸಂಬಂಧಿಕರು ಹಾಗೂ ಸ್ನೇಹಿತರು ಸೇರಿ ಲಿಂಗಾರಾಜ ಅವರ ಮೃತದೇಹವನ್ನು ವಾಹನದ ಮೂಲಕ ಸ್ವಗ್ರಾಮ ಬೈಲಹೊಂಗಲಕ್ಕೆ ಕಳಿಸುವ ವ್ಯವಸ್ಥೆ ಮಾಡಿದ್ದರು.
ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಅಂತ್ಯ ಸಂಸ್ಕಾರ ಆದರೆ, ಮೃತದೇಹವನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸುವಂತಿಲ್ಲ ಎನ್ನುವ ಸರ್ಕಾರದ ಆದೇಶ ಹಿನ್ನೆಲೆ ಶವವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಇದೇ ಚೆಕ್ ಪೋಸ್ಟ್ನಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದಾರೆ. ರಾಜ್ಯದೊಳಗೆ ಇಂತಹ ಪ್ರಕರಣಗಳಿಗೆ ಪ್ರವೇಶ ಇಲ್ಲದ ಹಿನ್ನೆಲೆ ಸ್ಥಳೀಯ ಅಧಿಕಾರಿಗಳ ನೆರವಿನಿಂದ ಇಲ್ಲಿಯವರೆಗೆ ಒಟ್ಟು ಮೂರು ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆಯಂತೆ.