ಬೆಳಗಾವಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ತಡೆಗೆ ಎರಡು ದಿನ ವೀಕೆಂಡ್ ಲಾಕ್‌ಡೌನ್ ಜಾರಿ ಹಿನ್ನೆಲೆ ಸಾರ್ವಜನಿಕರು ಅಗತ್ಯ ಕಾರಣಕ್ಕೆ ಮತ್ತು ಅನಗತ್ಯವಾಗಿ ರಸ್ತೆಗಿಳಿದ ಪರಿಣಾಮ ನಗರದ ಚೆನ್ನಮ್ಮ ವೃತ್ತ, ಅಶೋಕ ಸರ್ಕಲ್ನಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ಬೆಳಗಾವಿಯಲ್ಲಿ ಲಾಕ್‌ಡೌನ್ ನಡುವೆಯೂ ಟ್ರಾಫಿಕ್ ಜಾಮ್! - ವೀಕೆಂಡ್ ಲಾಕ್‌ಡೌನ್
ಬೆಳಗಾವಿಯಲ್ಲಿ ಕೊರೊನಾ ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕೆ ತರುವ ಸಲುವಾಗಿ ವೀಕೆಂಡ್ ಲಾಕ್‌ಡೌನ್ ಜಾರಿ ಮಾಡಿದ್ದಾರೆ. ಈ ಹಿನ್ನೆಲೆ ಜನರು ವಸ್ತುಗಳನ್ನು ಕೊಳ್ಳಲು ರಸ್ತೆಗಿಳಿದಿದ್ದು, ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
![ಬೆಳಗಾವಿಯಲ್ಲಿ ಲಾಕ್‌ಡೌನ್ ನಡುವೆಯೂ ಟ್ರಾಫಿಕ್ ಜಾಮ್! traffic](https://etvbharatimages.akamaized.net/etvbharat/prod-images/768-512-04:31:58:1622199718-kn-bgm-01-28-traffic-vsl-ka10029-28052021095405-2805f-1622175845-82.jpg)
ಕುಂದಾನಗರಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ತರುವ ಸಲುವಾಗಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ವೀಕೆಂಡ್ ಲಾಕ್‌ಡೌನ್ ಜಾರಿ ಮಾಡಿದ್ದಾರೆ. ಆದ್ರೆ, ಕೊರೊನಾ ತಡೆಗೆ ಸಹಕರಿಸಬೇಕಿದ್ದ ಸಾರ್ವಜನಿಕರು ಲಾಕ್‌ಡೌನ್ ಇಲ್ಲವೇನೋ ಎಂಬಂತೆ ಅನಗತ್ಯವಾಗಿ ರಸ್ತೆಗಿಳಿಯುತ್ತಿದ್ದಾರೆ.
ಇತ್ತ ಅನಗತ್ಯವಾಗಿ ಓಡಾಡುವ ಜನರ ತಡೆಗೆ ನಗರದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಲಾಕ್‌ಡೌನ್ ನಿಯಮಗಳನ್ನು ತೀವ್ರ ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದು, ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಪರಿಣಾಮ, ನಗರದ ಚೆನ್ನಮ್ಮ ವೃತ್ತ, ಅಶೋಕ ಸರ್ಕಲ್, ಕೊಲ್ಲಾಪುರ ವೃತ್ತ ಸೇರಿದಂತೆ ನಗರದ ಪ್ರಮುಖ ಕಡೆ ಟ್ರಾಫಿಕ್ ಜಾಮ್ ಆಗುತ್ತಿದೆ. ಜನಸಂಚಾರ, ವಾಹನ ಸಂಚಾರ ನಿರ್ಬಂಧಿಸಲು ಸರ್ಕಾರ ಎಷ್ಟೇ ಪ್ರಯತ್ನ ಪಡುತ್ತಿದ್ದರೂ ಸಾರ್ವಜನಿಕರು ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾ ಅನಗತ್ಯವಾಗಿ ರಸ್ತೆಗೆ ಬರುತ್ತಿದ್ದಾರೆ. ಈ ಮೂಲಕ ಕೊರೊನಾ ಆತಂಕ ಹೆಚ್ಚಿಸಿದ್ದಾರೆ. ಇತ್ತ ಅನಗತ್ಯವಾಗಿ ಓಡಾಡುವವರಿಗೂ ತೀವ್ರ ಬಿಸಿ ಮುಟ್ಟಿಸುತ್ತಿರುವ ಪೊಲೀಸರು, ದಂಡದ ಜೊತೆಗೆ ಬೈಕ್ಗಳನ್ನು ಸೀಜ್ ಮಾಡುತ್ತಿದ್ದಾರೆ.