ಬೆಳಗಾವಿ:ಸವದತ್ತಿ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ಸೇರಿ ಗಡಿ ಜಿಲ್ಲೆಯ ಮೂರು ದೇವಾಲಯಗಳ ಪ್ರವೇಶಕ್ಕೆ ಮತ್ತೆ ಒಂದು ತಿಂಗಳು ಭಕ್ತರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂರು ದೇವಾಲಯಗಳು ಮತ್ತೊಂದು ತಿಂಗಳು ಬಂದ್ - belgavi latest news
ಕೋವಿಡ್ ಭೀತಿ ಹಿನ್ನೆಲೆ ಸವದತ್ತಿಯ ರೇಣುಕಾದೇವಿ, ಜೋಗುಳಭಾವಿ ಸತ್ತೆಮ್ಮ ಮತ್ತು ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಸ್ಥಾನಗಳಿಗೆ ನವೆಂಬರ್ 30ರವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
![ಬೆಳಗಾವಿ ಜಿಲ್ಲೆಯ ಮೂರು ದೇವಾಲಯಗಳು ಮತ್ತೊಂದು ತಿಂಗಳು ಬಂದ್ Three Temples of Belgaum is closed at next month](https://etvbharatimages.akamaized.net/etvbharat/prod-images/768-512-9377729-thumbnail-3x2-tmpl.jpg)
ಸತತ 8 ತಿಂಗಳಿಂದ ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದೇಶದಾದ್ಯಂತ ಮಹಾಮಾರಿ ಕೊರೊನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ಜಿಲ್ಲೆಯ ಪ್ರಮುಖ ಮೂರು ದೇವಸ್ಥಾನ ಬಂದ್ ಮಾಡಲಾಗಿದ್ದು, ಭಕ್ತರು ಇದೀಗ ಮತ್ತೊಂದು ತಿಂಗಳು ಕಾಯಬೇಕಿದೆ. ಸವದತ್ತಿಯ ರೇಣುಕಾದೇವಿ, ಜೋಗುಳಭಾವಿ ಸತ್ತೆಮ್ಮ ಮತ್ತು ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಸ್ಥಾನಗಳಿಗೆ ನವೆಂಬರ್ 30ರವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಮಹಾರಾಷ್ಟ್ರ ಹಾಗೂ ಗೋವಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದ್ರೆ ದೇವಸ್ಥಾನದಲ್ಲಿ ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನದ ಸಿಇಒ ರವಿ ಕೋಟಾರಗಸ್ತಿ ಮಾಹಿತಿ ನೀಡಿದ್ದಾರೆ.