ಅಥಣಿ/ಚಿಕ್ಕೋಡಿ:ಉಪಚುನಾವಣೆ ಕಣ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರು ತಮ್ಮ,ತಮ್ಮ ಅಭ್ಯರ್ಥಿಗಳ ಪರ ಮತ ಪ್ರಚಾರವನ್ನು ಬರದಿಂದ ನಡೆಸುತ್ತಿದ್ದಾರೆ.
ಇಂದು ಅಥಣಿ ತಾಲೂಕಿನ ನದಿ ಇಂಗಳಗಾಂವ, ದರೂರ, ಹಲ್ಯಾಳ, ಸಪ್ತಸಾಗರ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಲಕ್ಷ್ಮಿ ಹೆಬ್ಬಾಳಕರ ಮತ್ತು ಎಮ್ .ಬಿ. ಪಾಟೀಲ್ ಮತಯಾಚಿಸಿದರೆ ಇತ್ತ ಡಿಸಿಎಮ್ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರವಾಗಿ ಮತಬೇಟೆಯಲ್ಲಿ ತೊಡಗಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್, ರಮೇಶ್ ಜಾರಕಿಹೊಳಿ ಕುರಿತು ಪ್ರಶ್ನೆ ಮಾಡಿದ ಮಾಧ್ಯಮದವರಿಗೆ ಏನೂ ಉತ್ತರಿಸದೆ ಅವರು ದೊಡ್ಡವರು. ದೇವರು ಎಂದು ಆಕಾಶ ದಿಟ್ಟಿಸಿ ಕೈ ಮುಗಿದರು. ನಂತರ ಬೆಳಗಾವಿ ರಾಜಕಾರಣದಿಂದ ಹೊರ ಬರುವ ಹಾಗೂ ಇನ್ನಷ್ಟು ಜನ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಬಸ್ಮಾಸುರ ಕಥೆ ಹೇಳಿದರು. ಬಸ್ಮಾಸುರ ಯಾರು ಎನ್ನುವ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಮೌನವಾಗಿ ತೆರಳಿದರು.