ಕರ್ನಾಟಕ

karnataka

ETV Bharat / state

ಬೆಳಗಾವಿಯ ಮೂವರು ಶಾಸಕರಿಂದ ಸಚಿವ ಸ್ಥಾನಕ್ಕೆ ಲಾಬಿ ; ಬಿಜೆಪಿ ನಾಯಕರಿಗೆ ಹೊಸ ತಲೆನೋವು - mla duryodhana lobby for minister post

ಈಗಾಗಲೇ ಓರ್ವ ಡಿಸಿಎಂ ಸೇರಿದಂತೆ ನಾಲ್ವರು ಸಚಿವರಿದ್ದಾರೆ. ಪರಿಷತ್ ಸರ್ಕಾರದ ಮುಖ್ಯಸಚೇತಕ, ಕೆಎಂಎಫ್ ಅಧ್ಯಕ್ಷ, ದೆಹಲಿ ವಿಶೇಷ ಪ್ರತಿನಿಧಿ, ಡೆಪ್ಯೂಟಿ ಸ್ಪೀಕರ್ ಸೇರಿದಂತೆ ಮೂವರು ನಿಗಮ ಮಂಡಳಿ ಅಧ್ಯಕ್ಷರಿದ್ದಾರೆ. ಇಷ್ಟೆಲ್ಲ ಜಿಲ್ಲೆಗೆ ಸಿಕ್ಕರೂ ಮತ್ತೆ ಮೂವರು ಸಚಿವ ಸ್ಥಾನಕ್ಕೆ ಲಾಬಿ ಮಾಡ್ತಿರುವುದು ಕುತೂಹಲ ಮೂಡಿಸಿದೆ. ಅಲ್ಲದೇ ಇದು ಬಿಜೆಪಿ ನಾಯಕರಿಗೂ ತಲೆನೋವಾಗುವ ಸಾಧ್ಯತೆಯೂ ಇದೆ..

belgavi
ಬೆಳಗಾವಿ

By

Published : Jul 20, 2021, 6:06 PM IST

Updated : Jul 20, 2021, 6:11 PM IST

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬದಲಾವಣೆ ವದಂತಿಯ ಜೊತೆಗೆ ಸಚಿವ ಸಂಪುಟ ಪುನಾರಚನೆ ಬಗ್ಗೆಯೂ ಬಿಜೆಪಿ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಈ ಬೆಳವಣಿಗೆಯಿಂದ ಅಲರ್ಟ್ ಆಗಿರುವ ಜಿಲ್ಲೆಯ ಮೂವರು ಶಾಸಕರು, ಸಚಿವ ಸ್ಥಾನಕ್ಕಾಗಿ ಕಸರತ್ತು ಆರಂಭಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ, ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಂತ್ರಿಸ್ಥಾನಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ಯಾವ ಸರ್ಕಾರ ನೀಡದಷ್ಟು ರಾಜಕೀಯ ಪ್ರಾತಿನಿಧ್ಯ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಬೆಳಗಾವಿಗೆ ಸಿಕ್ಕಿದೆ.

ಈಗಾಗಲೇ ಓರ್ವ ಡಿಸಿಎಂ ಸೇರಿದಂತೆ ನಾಲ್ವರು ಸಚಿವರಿದ್ದಾರೆ. ಪರಿಷತ್ ಸರ್ಕಾರದ ಮುಖ್ಯಸಚೇತಕ, ಕೆಎಂಎಫ್ ಅಧ್ಯಕ್ಷ, ದೆಹಲಿ ವಿಶೇಷ ಪ್ರತಿನಿಧಿ, ಡೆಪ್ಯೂಟಿ ಸ್ಪೀಕರ್ ಸೇರಿದಂತೆ ಮೂವರು ನಿಗಮ ಮಂಡಳಿ ಅಧ್ಯಕ್ಷರಿದ್ದಾರೆ. ಇಷ್ಟೆಲ್ಲ ಜಿಲ್ಲೆಗೆ ಸಿಕ್ಕರೂ ಮತ್ತೆ ಮೂವರು ಸಚಿವ ಸ್ಥಾನಕ್ಕೆ ಲಾಬಿ ಮಾಡ್ತಿರುವುದು ಕುತೂಹಲ ಮೂಡಿಸಿದೆ. ಅಲ್ಲದೇ ಇದು ಬಿಜೆಪಿ ನಾಯಕರಿಗೂ ತಲೆನೋವಾಗುವ ಸಾಧ್ಯತೆಯೂ ಇದೆ.

ಮಂತ್ರಿಸ್ಥಾನ ಸಿಕ್ಕರೆ ನೆಮ್ಮದಿಯಂತೆ!

ಮೈತ್ರಿ ಸರ್ಕಾರದ ಪತನಗೊಳ್ಳಲು ಹಾಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಅಥಣಿ ಶಾಸಕ ಮಹೇಶ ಕುಮಟಳ್ಳಿ ಪಾತ್ರವೂ ಇದೆ. ರಮೇಶ ಜಾರಕಿಹೊಳಿ ಆಪ್ತರಾಗಿದ್ದ ಮಹೇಶ ಕುಮಟಳ್ಳಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇನ್ನುಳಿದ ಎಲ್ಲರೂ ಸಚಿವರಾದರೂ ಮಹೇಶ ಕುಮಟಳ್ಳಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿಲ್ಲ.

ಅಥಣಿ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಲಕ್ಷ್ಮಣ ಸವದಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬಿ ಎಸ್ ಯಡಿಯೂರಪ್ಪನವರ ಸಂಪುಟ ಸೇರ್ಪಡೆಯಾದರು. ಅಲ್ಲದೇ ಡಿಸಿಎಂನಂಥ ಮಹತ್ವದ ಹುದ್ದೆಯ ಜೊತೆಗೆ ಸಾರಿಗೆ ಇಲಾಖೆಯ ಸಚಿವ ಸ್ಥಾನ ಪಡೆದಿದ್ದಾರೆ. ಲಕ್ಷ್ಮಣ ಸವದಿ ಅವರು ಸಂಪುಟದಲ್ಲಿದ್ದ ಕಾರಣ ಮಹೇಶ ಕುಮಟಳ್ಳಿ ಮಂತ್ರಿ ಆಗಲಿಲ್ಲ. ಇದೀಗ ಸಂಪುಟ ಪುನಾರಚನೆ ಆದರೆ ತನ್ನನ್ನು ಪರಿಗಣಿಸುವಂತೆ ಒತ್ತಾಯಿಸುವುದಾಗಿಯೂ ಮಹೇಶ ಕುಮಟಳ್ಳಿ ಹೇಳಿಕೊಂಡಿದ್ದಾರೆ.

ಅಲ್ಲದೇ ಕಳೆದ ಎರಡು ವರ್ಷಗಳಿಂದ ನಾನು ಬಿಜೆಪಿಯಲ್ಲಿ ಖುಷಿಯಾಗಿದ್ದೇನೆ. ಸಿಎಂ ಹಾಗೂ ಹೈಕಮಾಂಡ್ ನೀಡುವ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಜಿಲ್ಲೆಯಲ್ಲಿ ಬಹಳಷ್ಟು ಜನರು ಮಂತ್ರಿ ಆಗಿರುವ ಕಾರಣಕ್ಕೆ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಸಂಪುಟ ಪುನಾರಾಚನೆ ಆದರೆ ಮಂತ್ರಿ ಸ್ಥಾನ ನೀಡುವಂತೆ ಕೋರುತ್ತೇನೆ. ಮಂತ್ರಿ ಸ್ಥಾನ ಸಿಕ್ಕರೆ ನನಗೂ ಒಂಥರಾ ನೆಮ್ಮದಿ ಆಗುತ್ತೆ ಎಂದು ಮಹೇಶ ಕುಮಟಳ್ಳಿ ಮಾಧ್ಯಮಗಳ ಎದುರು ಸಚಿವ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ.

ನಾನು ಹ್ಯಾಟ್ರಿಕ್ ಹಿರೋ ಎಂದ ಐಹೊಳೆ!

ರಾಯಭಾಗ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಮೂರು ಸಲ ಸತತವಾಗಿ ಗೆಲುವು ದಾಖಲಿಸಿದ್ದಾರೆ. ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಕಾರಣ ದುರ್ಯೋಧನ ಐಹೊಳೆ ಕೂಡ ಅಲರ್ಟ್ ಆಗಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ್ದಾರೆ.

ಬೆಂಗಳೂರಿಗೆ ಹೋದಾಗ ಒಮ್ಮೆಯಾದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ಉಪಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಬರುತ್ತಿದ್ದಾರೆ. ಸಂಪುಟ ಪುನಾರಚನೆ ಆದರೆ ತಾನೂ ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತೇನೆ. ಮೂರು ಸಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನಗೂ ಮಂತ್ರಿ ಆಗುವ ಅಪೇಕ್ಷೆ ಇದೆ. ಅವಕಾಶ ಕೊಟ್ರೆ ಸಮರ್ಪಕವಾಗಿ ನಿಭಾಯಿಸುವ ಸಾಮರ್ಥ್ಯ ತನಗಿದೆ ಎಂದು ಐಹೊಳೆ ಕೂಡ ಮನದಾಳದ ಮಾತನ್ನು ಮಾಧ್ಯಮಗಳ ಎದುರು ಬಹಿರಂಗಪಡಿಸಿದ್ದಾರೆ.

ಇನ್ನು, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಕೂಡ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಐದು ಸಲ ಚನಾವಣೆಗೆ ಸ್ಪರ್ಧಿಸಿದ್ದ ಅಭಯ, ಮೂರು ಸಲ ಗೆಲುವು ದಾಖಲಿಸಿ ಎರಡು ಸಲ ಪರಾಭವಗೊಂಡಿದ್ದಾರೆ. 1999ರಲ್ಲಿ ಬಾಗೇವಾಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಭಯ ಪರಾಭವಗೊಂಡು 2004ರ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು.

ಕ್ಷೇತ್ರ ವಿಂಗಡನೆ ಬಳಿಕ 2008ರಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. 2013ರಲ್ಲಿ ಚುನಾವಣೆಯಲ್ಲಿ ಸೋತಿದ್ದ ಅಭಯ 2018ರ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಆರ್​ಎಸ್‍ಎಸ್ ನಾಯಕರ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಅಭಯ, ಜೈನ್ ಸಮುದಾಯದ ಕೋಟಾದಡಿ ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದಕ್ಕಾಗಿ RSS ನಾಯಕರ ಮೂಲಕ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಚಿವಾಕಾಂಕ್ಷಿಗಳನ್ನು ಬಿಜೆಪಿ ನಾಯಕರು ಯಾವ ರೀತಿ ಸಮಾಧಾನ ಪಡಿಸುತ್ತಾರೋ ಕಾದು ನೋಡಬೇಕಿದೆ.

Last Updated : Jul 20, 2021, 6:11 PM IST

ABOUT THE AUTHOR

...view details