ಬೆಳಗಾವಿ: ರಾಜ್ಯದಲ್ಲಿರುವ ಬಿಪಿಎಲ್ ಪಡಿತರದಾರರಿಗೆ ಆಹಾರ ಭದ್ರತೆ ಯೋಜನೆಯಡಿ ಅಕ್ಕಿಯ ಜೊತೆಗೆ ಜೋಳ, ಹೆಸರುಬೇಳೆ, ತೊಗರಿ ವಿತರಿಸಲು ಯೋಜಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ ಇಲಾಖೆಯ ಪ್ರಗತಿಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರ ಭದ್ರತೆ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ 5 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ. ಅಕ್ಕಿಯ ಜೊತೆಗೆ ಇತರ ಧಾನ್ಯ ವಿತರಿಸುವ ಯೋಜನೆಯಿದೆ. ಉತ್ತರ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ಜೋಳ, ತೊಗರಿ, ಹೆಸರುಬೇಳೆ ವಿತರಿಸಲಾಗುವುದು.
ದಕ್ಷಿಣ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ರಾಗಿ, ಹೆಸರು ಹಾಗೂ ತೊಗರಿ ವಿತರಿಸಬೇಕು ಎಂಬ ಯೋಜನೆ ಹಾಕಿದ್ದೇವೆ. ಎಪ್ರಿಲ್ ಒಂದರಿಂದಲೇ ರಾಜ್ಯದಾದ್ಯಂತ ಈ ಯೋಜನೆ ಜಾರಿಗೆ ತರಲಾಗುವುದು ಎಂದರು.
ಆಹಾರ ಭದ್ರತೆ ಯೋಜನೆಯಡಿ ಅಕ್ಕಿಯ ಜೊತೆ ಧಾನ್ಯ ವಿತರಿಸಲು ಚಿಂತನೆ: ಸಚಿವ ಉಮೇಶ್ ಕತ್ತಿ ಕೇವಲ ಅಕ್ಕಿ ಕೊಡುತ್ತಿರುವುದರಿಂದ ಉಪಯೋಗಕ್ಕಿಂತ ದುರ್ಬಳಕೆಯೇ ಹೆಚ್ಚುತ್ತಿದೆ. ಅಕ್ಕಿಯನ್ನು ಕಾಳಸಂತೆಗೆ ಕಳಿಸುತ್ತಿರುವ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಅಕ್ಕಿಯ ಜೊತೆಗೆ ಇತರ ಧಾನ್ಯಗಳನ್ನು ವಿತರಿಸಿದರೆ ಕಾಳಸಂತೆಗೆ ಅಕ್ಕಿ ಸರಬರಾಜು ಆಗುವುದನ್ನು ತಡೆಯಬಹುದು ಎಂದರು.
ಸ್ಥಳೀಯವಾಗಿಯೇ ಅಕ್ಕಿ ಖರೀದಿ
ಆಹಾರ ಭದ್ರತೆ ಯೋಜನೆಯಡಿ ವಿತರಿಸಲಾಗುತ್ತಿದ್ದ ಅಕ್ಕಿಯನ್ನು ಪಂಜಾಬಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಹೀಗಾಗಿ ಆಹಾರ ಭದ್ರತೆಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ರಾಜ್ಯದಲ್ಲೇ ಖರೀದಿಸಬೇಕು ಎಂಬ ಉದ್ದೇಶ ನಮ್ಮದು. ಇದರಿಂದ ನಮ್ಮ ರಾಜ್ಯದ ಭತ್ತ ಬೆಳೆಯುವ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ.
ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕಿದೆ. ಶೀಘ್ರವೇ ದೆಹಲಿಗೆ ತೆರಳಿ ಕೇಂದ್ರ ನಾಯಕರ ಜೊತೆಗೂ ಚರ್ಚಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ ರಾಜ್ಯದಲ್ಲೇ ಅಕ್ಕಿ ಖರೀದಿಸಲಾಗುವುದು. ಇನ್ನು ಮುಂದೆ ಕಾಳಸಂತೆಗೆ ಅಕ್ಕಿ ಸಾಗಾಟವಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಅನಧಿಕೃತ ಪಡಿತರ ಚೀಟಿ ರದ್ದು
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ಅನಧಿಕೃತ ಪಡಿತರ ಚೀಟಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಹಶೀಲ್ದಾರ್, ಪಿಡಿಒ, ಗ್ರಾಪಂ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ಪ್ರತಿಗ್ರಾಮಗಳಲ್ಲಿ ಸರ್ವೆ ಮಾಡಿಸಲಾಗುವುದು. ಅನಧಿಕೃತ ಕಾರ್ಡ್ ಪತ್ತೆ ಹಚ್ಚಲಾಗುವುದು. ಮಾರ್ಚ್ 31ರೊಳಗೆ ಅನಧಿಕೃತ ಪಡಿತರ ಚೀಟಿದಾರರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಬಳಿಕವೇ ಅನಧಿಕೃತ ಕಾರ್ಡ್‍ಗಳನ್ನು ರದ್ದುಪಡಿಸಲಾಗುವುದು. ಬಿಪಿಎಲ್ ಕಾರ್ಡ್ ಪಡೆಯಲು ಅದರದೇ ಆದ ಮಾನದಂಡಗಳಿವೆ. ಮಾನದಂಡ ಉಲ್ಲಂಘಿಸಿ ಕಾರ್ಡ್ ಪಡೆದಿದ್ದರೆ ಅಂಥ ಕಾರ್ಡ್‍ಗಳನ್ನು ರದ್ದು ಮಾಡಲಾಗುವುದು. ಅರ್ಹ ಫಲಾನುಭವಿಗಳಿಗೆ ಮಾತ್ರವೇ ಬಿಪಿಎಲ್ ಕಾರ್ಡ್ ಸಿಗಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಇದನ್ನೂ ಓದಿ:ಕೋವಿಡ್ ಸಮಯದಲ್ಲಿ ಅಂಗನವಾಡಿಗಳ ಸೇವೆ.. ಮನೆ ಬಾಗಿಲಿಗೆ ಪೌಷ್ಟಿಕ ಆಹಾರ ಪೂರೈಕೆ