ಬೆಳಗಾವಿ: ಮದುವೆ ಮನೆಗೆ ಬಂದು ಊಟ ಮಾಡಿ ಹೋಗು ಮಾರಾಯ ಅಂದರೆ, ಮಹಿಳೆಯ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಇಮ್ತಿಯಾಜ್ ಹುಬ್ಳಿವಾಲೇ ಎಂದು ಗುರುತಿಸಲಾಗಿದೆ.
ವಿದ್ಯಾಧಿರಾಜ್ ಕಲ್ಯಾಣ ಮಂಟಪದಲ್ಲಿ ಗುರುವಾರ ಘಟನೆ ನಡೆದಿತ್ತು. ಲತಾ ಹೆಚ್.ಎಸ್.ಎಂಬವರು ಚಿನ್ನಾಭರಣ ಮತ್ತು ಹಣ ಕಳೆದುಕೊಂಡಿದ್ದರು. ಬ್ಯಾಗ್‌ನಲ್ಲಿದ್ದ 3.5 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 3,500 ರೂ. ದೋಚಿ ಆರೋಪಿ ಪರಾರಿಯಾಗಿದ್ದನು. ಲತಾ ಅವರ ಪತಿ ಪಂಚಾಕ್ಷರಿ ಎಂ.ಕೆ. ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದರು.
ಘಟನಾ ಸ್ಥಳಕ್ಕೆ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವ್ಯಾನಿಟಿ ಬ್ಯಾಗ್ ದೋಚಿದ್ದ ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ಆಧರಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರತ್ಯೇಕ ಪ್ರಕರಣ-ಹಾವೇರಿಯಲ್ಲಿ ಶ್ರೀಗಂಧ ಮರಗಳ್ಳನ ಬಂಧನ: ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದವನನ್ನು ಹಾವೇರಿ ಜಿಲ್ಲಾ ಶಿಗ್ಗಾಂವಿ ತಾಲೂಕು ಬಂಕಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ನಿವಾಸಿ ಸೈಯದ್ ಇಸ್ತಾರ್ ಕರೀಮ್ (27) ಎಂದು ಗುರುತಿಸಲಾಗಿದೆ.
ಹಾವೇರಿಯಲ್ಲಿ ಶ್ರೀಗಂಧದ ಮರಗಳ್ಳನ ಬಂಧನ ಈತನಿಂದ ಸುಮಾರು 2,04,800 ಲಕ್ಷ ರೂ. ಮೌಲ್ಯದ 102 ಕೆ.ಜಿ 400 ಗ್ರಾಂ ಶ್ರೀಗಂಧ ಕಟ್ಟಿಗೆಯ ತುಂಡುಗಳು ಮತ್ತು ಸೆಂಟ್ರೋ ಕಾರು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಉತ್ತರಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ 20ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಬಂಕಾಪುರ ಪಿಎಸ್ಐ ನಿಂಗರಾಜ್ ಕರಕರಣ್ಣನವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಕಾಪುರ ಠಾಣೆಯ ಪೊಲೀಸರ ಕಾರ್ಯಕ್ಕೆ ಹಾವೇರಿ ಎಸ್ಪಿ ಅಂಶುಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಕೆಲಸಕ್ಕೆ ಸೇರಿದವನಿಂದಲೇ ಮಾಲೀಕನ ಮಗು ಅಪಹರಣ ಆರೋಪ; ತಂದೆಯಿಂದ ದೂರು