ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ಬೆಳಗಾವಿ:ಇವತ್ತಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ. ಈ ಭಾಗವನ್ನು ಕೇಂದ್ರಸ್ಥಳವಾಗಿ ಇಟ್ಟುಕೊಂಡು ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಚರ್ಚೆಯಾಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಚುನಾವಣೆಯಲ್ಲಿ ಹಿನ್ನಡೆ:ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಕ್ಕೆ ಸಂತೋಷವಾಗಿದೆ. ಮೂರು ರಾಜ್ಯಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ನಾವು ಈ ರೀತಿ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಹಿಂದಿ ಭಾಷೆಯ ಪ್ರಾಂತ್ಯದಲ್ಲಿ ನಮಗೆ ಹಿನ್ನಡೆಯಾಗಿದೆ. ನಾವು ಜನರಿಗೆ ಪ್ರೀತಿಯನ್ನು ಇನ್ನಷ್ಟು ಕಳಿಸಬೇಕಾಗಿದೆ. ಜನರ ತೀರ್ಪನ್ನು ಸ್ವಾಗತಿಸುತ್ತೇವೆ ಎಂದರು.
ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬಿರುವುದಿಲ್ಲ. ಲೋಕಸಭಾ ಚುನಾವಣೆ ಫಲಿತಾಂಶವೇ ಬೇರೆ ಆಗಿರುತ್ತದೆ. ಆ ಹೊತ್ತಿನಲ್ಲಿ ಜನರ ವಿಶ್ವಾಸ ಗಳಿಸಿಕೊಳ್ಳುತ್ತೇವೆ. ನಾವು ಎಲ್ಲಿ ಎಡವಿದೆವು ಎಂದು ವರಿಷ್ಠರು ಚರ್ಚೆ ಮಾಡುತ್ತಾರೆ. ಸೋಲಿನಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹತಾಶ ಭಾವನೆ ಇಲ್ಲ ಎಂದು ತಿಳಿಸಿದರು.
ಚುನಾವಣೆಯಲ್ಲಿ ಗ್ಯಾರಂಟಿ ಎಂಬುದು ಒಂದು ಅಂಶ ಮಾತ್ರ. ನಮ್ಮ ಗ್ಯಾರೆಂಟಿಗಳನ್ನೇ ಮಧ್ಯಪ್ರದೇಶದಲ್ಲಿ ಕಾಪಿ ಮಾಡಲಾಯಿತು. ಕರ್ನಾಟದಲ್ಲಿ ಗ್ಯಾರಂಟಿ ಯೋಜನೆಗಳಿಂದ ಗೆಲುವು ಸಾಧಿಸಿಲ್ಲ. ನಾಯಕತ್ವ, ಸಂಘಟನೆ, ಹೋರಾಟ ಹಿಂದಿನ ಸರ್ಕಾರ ವೈಫಲ್ಯ, ರಾಜಕೀಯ ತಂತ್ರ, ಹಲವು ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ವರ್ಕ್ ಆಗಲಿಲ್ಲ ಎಂಬುದು ತಪ್ಪಾಗುತ್ತದೆ. ಕೆಲವು ರಾಜ್ಯಕ್ಕೆ ಕೆಲವು ಅಂಶಗಳು ಅಲ್ಲಿ ಪ್ರಮುಖ ಕಾರಣಗಳನ್ನು ಹೊಂದಿರುತ್ತದೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ