ಬೆಳಗಾವಿ: ಪಕ್ಕದ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ ಎಂದು ಉಸ್ತುವಾರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವಾಹ, ಕೊರೊನಾ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಇಂದು ಚಿಕ್ಕೋಡಿಯಲ್ಲಿ ಸಭೆ ಮಾಡಲಿದ್ದೇನೆ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ ಆಗುತ್ತಿದೆ. ಹೀಗಾಗಿ ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಎದುರಾಗುವ ಆತಂಕವಿಲ್ಲವೆಂದರು.
ಅದರಲ್ಲೂ ಕೊಯ್ನಾ ಡ್ಯಾಂನ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆ ಆಗುತ್ತಿದೆ. ವೇದಗಂಗಾ, ಧೂದಗಂಗಾ ನದಿಯಲ್ಲೂ ನೀರಿನ ಪ್ರವಾಹ ಕಡಿಮೆಯಾಗಿದೆ. ಜುಲೈ15ರವರೆಗೂ ಯಾವುದೇ ರೀತಿಯ ತೊಂದರೆ ಆಗಲ್ಲ ಎಂದು ತಿಳಿಸಿದರು.
ಇದೇ ವೇಳೆ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮಧ್ಯೆ ಕುಡಿಯುವ ನೀರಿಗಾಗಿ ಪರಸ್ಪರ ಒಪ್ಪಂದವಾಗಿದೆ. ಅವರು ನಮ್ಮ ಬೆಳಗಾವಿಗೆ ಬೇಸಿಗೆ ಸಂದರ್ಭದಲ್ಲಿ 4 ಟಿಎಂಸಿ ಕುಡಿಯುವ ನೀರು ಕೊಡಬೇಕು. ನಾವು ಮಹಾರಾಷ್ಟ್ರದ ಜತ್ತ ತಾಲೂಕಿಗೆ 4 ಟಿಎಂಸಿ ಕುಡಿಯುವ ನೀರು ನೀಡುವ ಕೆಲಸ ಮಾಡಬೇಕಿದೆ. ಈ ಬಗ್ಗೆ ಪರಸ್ಪರ ಒಪ್ಪಂದವಾಗಿದ್ದು, ಸರ್ಕಾರದ ಆದೇಶವನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದರು. ಕೊಯ್ನಾ ಡ್ಯಾಂನಿಂದ ನೀರನ್ನು ಏಕಾಏಕಿ ಬಿಡುವ ಬಗ್ಗೆ ಮುಂಚೆಯೇ ಕರ್ನಾಟಕಕ್ಕೆ ಹೇಳಬೇಕು.ಇಲ್ಲವಾದರೆ ಪ್ರವಾಹ ಬರುತ್ತದೆ ಎನ್ನುವುದನ್ನು ನಾವು ಹೇಳಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಆಟೋ ಚಾಲಕನ ಬರ್ಬರ ಕೊಲೆ.. ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು
ಮಾಜಿ ಸಿಎಂ ಕುಮಾರಸ್ವಾಮಿ ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡದೇ ಕಾರಜೋಳ ತೆರಳಿದರು.