ಬೆಳಗಾವಿ:ಕಳೆದ ಮೂರು ವಾರಗಳಿಂದ ಉಮೇಶ್ ಕತ್ತಿಯವರ ಮನೆಯಲ್ಲಿ ಶಾಸಕರೆಲ್ಲರೂ ಸೇರಿ ಊಟ ಮಾಡುತ್ತಿದ್ದೇವೆ. ಆದ್ರೆ, ಸಿಎಂ ಬದಲಾವಣೆ ಚರ್ಚೆ ನಡೆಸಿಲ್ಲ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹೇಳಿದರು.
ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಸಿಲ್ಲ: ಶಾಸಕ ಅಭಯ್ ಪಾಟೀಲ್ ಸ್ಪಷ್ಟನೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿರಿಯ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಹಲವು ದಿನಗಳಿಂದ ಭೋಜನಕೂಟ ಮಾಡಲಾಗುತ್ತಿದೆ. ಆದರೆ, ಈ ಭೋಜನ ಕೂಟ ವಿಚಾರ ಮಾಧ್ಯಮದವರಿಗೆ ನಿನ್ನೆ ಗೊತ್ತಾಗಿದೆ ಎಂದರು. ನಾನು ಕಳೆದ ಮೂರು ವಾರಗಳಿಂದ ಅವರ ಮನೆಯಲ್ಲಿ ಊಟಕ್ಕೆ ಹೋಗುತ್ತಿದ್ದೇವೆ. ಆಗ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸೇರಿದಂತೆ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದರು.
ಮತ್ತೆ ಮುಂದಿನ ಬುಧವಾರ ಉಮೇಶ್ ಕತ್ತಿ ಮನೆಗೆ ಊಟಕ್ಕೆ ಹೋಗುತ್ತಿದ್ದೇವೆ. ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ನೀಡುವ ಹಾಗೂ ಸಿಎಂ ಬದಲಾವಣೆ ಕುರಿತು ಚರ್ಚೆಯಾಗಿಲ್ಲ ಎಂದರು.
ಇನ್ನು ಸಿಎಂ ಬದಲಾವಣೆ ಕುರಿತು ಹಿರಿಯ ಶಾಸಕರನ್ನು ಕೇಳಬೇಕು. ಬೆಳಗಾವಿ ಜಿಲ್ಲೆಯಲ್ಲಿ ನಾನು 1990ರಿಂದ ಬಿಜೆಪಿಯಲ್ಲಿದ್ದೇನೆ. ಹೀಗಾಗಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ನನಗೆ ಯಾವಾಗ ಗುರುತಿಸಿ ಅವಕಾಶ ನೀಡುತ್ತದೋ ಅಲ್ಲಿಯವರೆಗೆ ಕಾಯುತ್ತೇನೆ ಎಂದರು.
ನನ್ನ ಕ್ಷೇತ್ರಕ್ಕೂ ಅನುದಾನದ ಕೊರತೆಯಾಗಿದೆ. ಈ ಕುರಿತು ಸಾಕಷ್ಟು ಬಾರಿ ಶಾಸಕಾಂಗ ಸಭೆಯಲ್ಲಿ ತಿಳಿಸಿದ್ದೇನೆ. ಆದರೆ, ನಾಯಕತ್ವ ಬದಲಾವಣೆ ಕುರಿತು ಚರ್ಚೆ ಮಾಡಿಲ್ಲ ಎಂದು ಶಾಸಕ ಅಭಯ್ ಪಾಟೀಲ್ ಸ್ಪಷ್ಟಪಡಿಸಿದರು.