ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೇವಸ್ಥಾನ, ಮನೆಗಳಲ್ಲಿ ಬೆಳೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ತಂಡವು ತಾಲೂಕಿನಲ್ಲಿ ಬೀಡುಬಿಟ್ಟಿದ್ದರಿಂದ, ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಪೊಲೀಸ್ ಇಲಾಖೆ ಮಾರ್ಗದರ್ಶನದಲ್ಲಿ ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ಡಂಗುರ ಸಾರಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ತಾಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ನಾಲ್ಕು ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಕೋಕಟನೂರ, ಸುಟ್ಟಟ್ಟಿ, ಶಿರಹಟ್ಟಿ, ಝುಂಜರವಾಡ ಗ್ರಾಮಗಳಲ್ಲಿ ದೇವಸ್ಥಾನ, ಬೀಗ ಹಾಕಿದ ಮನೆಗಳು, ಅಂಗಡಿ, ಬ್ಯಾಂಕ್ ಗಳಿಗೆ ಕಳ್ಳರು ಕನ್ನ ಹಾಕಿದ್ದರಿಂದ ತಾಲೂಕಿನ ತುಂಬೆಲ್ಲಾ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಅಥಣಿ ಡಿವೈಎಸ್ಪಿ ಎಸ್. ವಿ. ಗಿರೀಶ್ ಹಾಗೂ ಸಿಪಿಐ ಶಂಕರಗೌಡ ಬಸವನಗೌಡರ ಮಾರ್ಗದರ್ಶನದಲ್ಲಿ ತಾಲೂಕಿನ ಐಗಳಿ, ಕಾಗವಾಡ, ಅಥಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮದಲ್ಲಿ ಡಂಗುರ ಸಾರಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.