ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಹಾಡಹಗಲೇ ಬಟ್ಟೆ ಅಂಗಡಿಗೆ ಬಂದ ಖತರ್ನಾಕ ಕಳ್ಳರ ಲೇಡಿ ಗ್ಯಾಂಗ್ವೊಂದು ಲಕ್ಷಾಂತರ ಮೌಲ್ಯದ ಸೀರೆಗಳನ್ನು ಅಂಗಡಿ ಮಾಲೀಕರ ಕಣ್ಮುಂದೆಯೇ ಕದ್ದೊಯ್ದಿರುವ ಘಟನೆ ಬೆಳಗಾವಿ ನಗರದಲ್ಲಿ ನಿನ್ನೆ ನಡೆದಿದೆ. ಬೆಳಗಾವಿಯ ಖಡೇ ಬಜಾರ್ನಲ್ಲಿರುವ ಮಹೇಶ ವಿರೂಪಾಕ್ಷಿ ಎಂಬುವವರಿಗೆ ಸೇರಿದ ವಿರೂಪಾಕ್ಷಿ ಬಟ್ಟೆ ಅಂಗಡಿಗೆ ಶುಕ್ರವಾರ ಮಧ್ಯಾಹ್ನ 1.21ರ ಸುಮಾರಿಗೆ ಬಂದ ಕಳ್ಳರ ಗ್ಯಾಂಗ್ ಈ ಕೃತ್ಯ ಎಸಗಿದೆ. ಈ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು ಎರಡು ಲಕ್ಷ ಮೌಲ್ಯದ 8 ಕಾಂಚಿಪುರಂ ಸೀರೆ, 1 ಇಳಕಲ್ ರೇಷ್ಮೆ ಸೀರೆ ಕಳ್ಳತನ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಕಳ್ಳರ ಮುಖಚರ್ಯೆ ಸಿಸಿಟಿವಿಯಲ್ಲಿ ಸ್ಪಷ್ಟವಾಗಿದೆ.
ಮೊದಲಿಗೆ ಆ ಗ್ಯಾಂಗ್ನ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಅಂಗಡಿಗೆ ಬಂದಿದ್ದು, ನಂತರ ಮತ್ತೆ ಮೂವರು ಮಹಿಳೆಯರು ಬಂದಿದ್ದಾರೆ. ಹೀಗೆ ಬಂದವರು ಒಬ್ಬರಿಗೊಬ್ಬರು ಪರಿಚಯ ಇಲ್ಲದಂತೆ, ಪ್ರತ್ಯೇಕವಾಗಿ ಸೀರೆಗಳನ್ನು ಚಾಯ್ಸ್ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ, ಅಂಗಡಿಯ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದು ಮೂವರು ಮಹಿಳೆಯರು ಅಡ್ಡಲಾಗಿ ನಿಂತಿದ್ದಾರೆ. ಆಗ, ಓರ್ವ ಮಹಿಳೆ ಸೀರೆ ಬಾಕ್ಸ್ಗಳನ್ನು ತನ್ನ ಸಿರೆಯೊಳಗೆ ಮುಚ್ಚಿಕೊಂಡಿದ್ದಾಳೆ. ಬಳಿಕ ಸೀರೆಗಳು ನಮಗೆ ಇಷ್ಟವಾಗಿಲ್ಲ ಎಂದು ಅಂಗಡಿಯಿಂದ ಸೀರೆಗಳ ಸಮೇತ ಕಳ್ಳರು ಎಸ್ಕೇಪ್ ಆಗಿದ್ದಾರೆ ಎಂದು ಗೊತ್ತಾಗಿದೆ.