ಅಥಣಿ :ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆತಾಲೂಕಿನ ರಾಮತೀರ್ಥ ಸ್ವಯಂಭೂ ಉಮಾ ರಾಮೇಶ್ವರ ದೇವಾಲಯದಿಂದ ತೀರ್ಥ ಪ್ರಸಾದ ಕಳುಹಿಸಲಾಗಿದೆ.
ರಾಮ ಮಂದಿರ ಭೂಮಿ ಪೂಜೆಗೆ ಅಥಣಿ ರಾಮತೀರ್ಥದಿಂದ ತೀರ್ಥ ಪ್ರಸಾದ ರವಾನೆ - ರಾಮ ಮಂದಿರ ಭೂಮಿ ಪೂಜೆಗೆ ಅಥಣಿಯಿಂದ ತೀರ್ಥ ಪ್ರಸಾದ
ರಾಮ ಕೆಲ ದಿನಗಳ ಕಾಲ ತಂಗಿದ್ದ ಐತಿಹ್ಯ ಇರುವ ಅಥಣಿ ತಾಲೂಕು ರಾಮತೀರ್ಥದ ಸ್ವಯಂಭೂ ಉಮಾ ರಾಮೇಶ್ವರ ದೇವಾಲಯದಿಂದ ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೀರ್ಥ ಪ್ರಸಾದ ಕಳುಹಿಸಲಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮತೀರ್ಥ ಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯಿದೆ. ರಾಮನ ವನವಾಸದ ಸಂದರ್ಭದಲ್ಲಿ ಕಹೋಳ ಋಷಿಯ ಆದೇಶದಂತೆ 40 ದಿನಗಳ ಕಾಲ ರಾಮತೀರ್ಥದಲ್ಲಿ ಅನುಷ್ಠಾನ ಮಾಡಿ, ಲಂಕೆಯ ಮೇಲೆ ದಿಗ್ವಿಜಯ ಸಾಧಿಸಿದ್ದ ಎಂಬ ಐತಿಹ್ಯವಿದೆ. ರಾಮ ಮಂದಿರ ಶಿಲಾನ್ಯಾಸ ಸಮಾರಂಭದಂದು ರಾಮತೀರ್ಥದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಪ್ರಕಾಶ್ ತಿಳಿಸಿದರು.
ಪುರಾಣ ಪ್ರಸಿದ್ದಿ ಪಡೆದ ರಾಮತೀರ್ಥ ಗ್ರಾಮವು ಅಥಣಿಯಿಂದ 29 ಕಿ.ಮೀ. ದೂರದಲ್ಲಿದೆ. ಇಲ್ಲಿ ಚಾಲುಕ್ಯ ಮಾದರಿಯ ಉಮಾ ಮಹೇಶ್ವರಿ ದೇವಾಲಯವಿದೆ. ಗುಡಿಯ ಒಳ ಹೊರಗಿನ ಶಿಲ್ಪ ಕಲೆ ಉತ್ಕೃಷ್ಟವಾಗಿದೆ. ಈ ಭಾಗದಲ್ಲಿಯೇ ಇಷ್ಟು ಸುಂದರವಾದ ಗುಡಿ ಇನ್ನೊಂದಿಲ್ಲ. ಈಶ್ವರನೊಂದಿಗೆ ತನ್ನ ಹೆಸರು ಚಿರಸ್ಥಾಯಿಯಾಗಲಿ ಎಂದು ಶ್ರೀ ರಾಮಚಂದ್ರ 'ರಾಮೇಶ್ವರ' ಎಂದು ನಾಮಕರಣ ಮಾಡಿದನೆಂದು ರಾಮೇಶ್ವರ ಮಹಾತ್ಮೆಯಲ್ಲಿ ಉಲ್ಲೇಖವಿದೆ.