ಬೆಳಗಾವಿ: ನರೇಂದ್ರ ಮೋದಿಯವರ ಆಡಳಿತ ವೈಖರಿ ಹಾಗೂ ಭಾರತದ ಅಭಿವೃದ್ಧಿಯಿಂದ ದೇಶದ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ಕೇಂದ್ರ ಸಚಿವ ಡಾ. ಹರ್ಷವರ್ಧನ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದ 20 ದೇಶಗಳಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ನರೇಂದ್ರ ಮೋದಿಯಂತಹ ಶ್ರೇಷ್ಠ ನಾಯಕತ್ವದಿಂದ ಇಡೀ ಜಗತ್ತೇ ಭಾರತದ ಚುನಾವಣೆಯತ್ತ ಮುಖ ಮಾಡಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು.
ಯಡಿಯೂರಪ್ಪ ಡೈರಿ ವಿಚಾರ ಸದ್ಯಕ್ಕೆ ಅಪ್ರಸ್ತುತ:
ಕೇಂದ್ರದ ಬಿಜೆಪಿ ನಾಯಕರಿಗೆ ಬಿಎಸ್ವೈ ಹಣ ನೀಡಿದ್ದಾರೆ ಎನ್ನಲಾದ ಡೈರಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹರ್ಷವರ್ಧನ್ ಅವರು, ಕಾಂಗ್ರೆಸ್ ಯಾವತ್ತಿಗೂ ಸುಳ್ಳು ಆರೋಪ ಮಾಡುವುದರಲ್ಲಿ ಎತ್ತಿದ ಕೈ. ರಫೇಲ್ ಹಗರಣ ಹಾಗೂ ಡೈರಿ ವಿಚಾರ ಈಗ ಅಪ್ರಸ್ತುತ. ಅದರ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಸಮಯ ವ್ಯರ್ಥ ಎಂದರು.