ಬೆಳಗಾವಿ:ಇಲ್ಲಿನ ಕುಟುಂಬವೊಂದು ಕೇವಲ ನಾಲ್ಕು ದಿನಗಳಲ್ಲಿ ನೆರವೇರಲಿದ್ದ ಏಕೈಕ ಪುತ್ರಿಯ ಮದುವೆ ಸಂಭ್ರಮದಲ್ಲಿತ್ತು. ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ ಈ ಕುಟುಂಬದ ಸಂಭ್ರಮವನ್ನೇ ಕಸಿದುಕೊಂಡಿದೆ. ಮಳೆಗೆ ಮನೆ ಕುಸಿದಿದ್ದು ಗಾಯಗೊಂಡಿರುವ ಅಪ್ಪ ಆಸ್ಪತ್ರೆ ಪಾಲಾಗಿದ್ದರೆ, ಇತ್ತ ಮದುವೆ ವಸ್ತುಗಳೆಲ್ಲ ನೀರು ಪಾಲಾಗಿ, ತಾಯಿ-ಪುತ್ರಿ ಕಣ್ಣೀರು ಹಾಕುತ್ತಿದ್ದಾರೆ.
ಐದು ಮನೆಗಳಿಗೆ ಹಾನಿ: ಈ ಘಟನೆ ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದಲ್ಲಿರುವ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಅಲಾರ್‍ವಾಡ್‍ನ ಆಶ್ರಯ ಕಾಲೋನಿಯಲ್ಲಿರುವ ಅಜಯ್ ಕ್ಷೀರಸಾಗರ ಎಂಬುವವರ ಮನೆ ಕುಸಿದುಬಿದ್ದಿದೆ. ಇದರಿಂದ ಪಕ್ಕದ ಐದು ಮನೆಗಳಿಗೆ ಹಾನಿಯಾಗಿದೆ. ಈ ಹಾನಿಯಾದ ಮನೆಗಳ ಪೈಕಿ ಚಂದ್ರಶೇಖರ್ ಹುಡೇದ್ ಎನ್ನುವವರ ಮನೆಯೂ ಒಂದು. ಚಂದ್ರಶೇಖರ ಅವರು ಕುಟುಂಬ ಸದಸ್ಯರ ಜೊತೆಗೂಡಿ ರಾತ್ರಿ ಊಟ ಮಾಡುವಾಗ ಮನೆ ಕುಸಿದಿದೆ. ಈ ವೇಳೆ ಚಂದ್ರಶೇಖರ್ ಅವರ ಬೆನ್ನಿಗೆ ಗಾಯವಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದ್ರಶೇಖರ ಹುಡೇದ್ ಅವರ ಏಕೈಕ ಪುತ್ರಿ ದೀಪಾ ಅವರ ಮದುವೆ ಇದೇ ತಿಂಗಳ 15ಕ್ಕೆ ನಿಶ್ಚಿಯವಾಗಿತ್ತು.
ಸ್ನೇಹಿತರು, ಸಂಬಂಧಿಕರಿಗೆ ನೀಡಲು ಆಹ್ವಾನ ಪತ್ರಿಕೆಗಳನ್ನು ಸಿದ್ಧಪಡಿಸಿಡಲಾಗಿತ್ತು. ಕೆಲವರಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತು, ಇನ್ನೂ ಕೆಲವರಿಗೆ ಆಹ್ವಾನ ಪತ್ರಿಕೆ ನೀಡುವುದು ಬಾಕಿ ಇತ್ತು. ಅಲ್ಲದೇ ಮದುವೆಗೆಂದು ಸಾಲ ಮಾಡಿ ದಿನಸಿ ಹಾಗೂ ಟ್ರೇಸರಿ, ಕ್ವಾಟ್ ಇತರ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಇಡಲಾಗಿತ್ತು. ಮನೆ ಕುಸಿತದಿಂದ ಈ ಎಲ್ಲ ವಸ್ತುಗಳಿಗೆ ಹಾನಿಯಾಗಿದೆ. ಇನ್ನು ಆಹ್ವಾನ ಪತ್ರಿಕೆ ಹಾಗೂ ದಿನಸಿ ನೀರು ಪಾಲಾಗಿವೆ. ಇತ್ತ ಗಾಯಗೊಂಡಿರುವ ಚಂದ್ರಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಮೇ ಎರಡನೇ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಶಿಕ್ಷಣ ಸಚಿವ ನಾಗೇಶ್
ಕುಸಿದ ಮನೆಗಳಲ್ಲೇ ಬದುಕುತ್ತಿರುವ ಜನರು:ಅಲಾರವಾಡ್ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಮಳೆರಾಯ ಅವಾಂತರ ಸೃಷ್ಟಿಸಿದ್ದಾನೆ. ಕೆಲ ಮನೆಗಳ ಮೇಲ್ಛಾವಣಿ ಹಾರಿ ಹೋದರೆ, ಇನ್ನು ಕೆಲವು ಮನೆಗಳು ಕುಸಿದಿವೆ. ಇದೀಗ ಕುಸಿದ ಮನೆಯಲ್ಲೇ ಜನರು ಬದುಕುತ್ತಿದ್ದಾರೆ. ಅಕಾಲಿಕ ಮಳೆಯಿಂದ ಬೆಳಗಾವಿಯ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ವರ್ಷಗಳ ಅತಿವೃಷ್ಟಿಯಿಂದ ಬೆಳಗಾವಿ ಜನರ ಬದುಕು ಚಿಂತಾಜನಕವಾಗಿದೆ. ಈಗಾಗಲೇ ಮನೆ ಕಳೆದುಕೊಂಡವರಿಗೆ ಜಿಲ್ಲಾಡಳಿತ ಇನ್ನೂ ಪರಿಹಾರ ನೀಡಿಲ್ಲ. ಇದೀಗ ಮತ್ತೆ ಮಳೆ ಆರಂಭವಾಗಿದ್ದು, ಜನರು ಜೀವಭಯದಲ್ಲೇ ಬದುಕು ದೂಡುತ್ತಿದ್ದಾರೆ.