ಚಿಕ್ಕೋಡಿ(ಬೆಳಗಾವಿ):ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು ಎಂಟು ವಲಯಗಳಿದ್ದು, ನಾಳೆಯಿದ ಪ್ರಾರಂಭವಾಗುವ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ 40,781 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆ ಬರೆಯಲಿರುವವರ ಸಂಖ್ಯೆ 40,781: ಡಿಡಿಪಿಐ ಮಾಹಿತಿ ತಮ್ಮ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈ ಬಾರಿ ಮಹಾರಾಷ್ಟ್ರದಿಂದ ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರಿಗೆ ಕರ್ನಾಟಕದ ಗಡಿಯಿಂದ ಬರಲು ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಕಾಗವಾಡದಲ್ಲಿ 7 ವಿದ್ಯಾರ್ಥಿಗಳು, ನಿಪ್ಪಾಣಿಯಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಬೊರಗಾಂವದಲ್ಲಿ 41 ಮಹಾರಾಷ್ಟ್ರದ ವಿದ್ಯಾರ್ಥಿಗಳು ಹೀಗೆ ಒಟ್ಟು ಮಹಾರಾಷ್ಟ್ರದಿಂದ 49 ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇಂತಹ ಮಕ್ಕಳಿಗೆ ಎನ್- 95 ಮಾಸ್ಕ್ ನೀಡಲಾಗುವುದು ಎಂದು ಹೇಳಿದರು.
ಈ ಬಾರಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಬರಲಿರುವ ವಲಸೆ ಮಕ್ಕಳು 595 ಹಾಗೂ ಹೊರರಾಜ್ಯದಲ್ಲಿ ಪರೀಕ್ಷೆ ಬರೆಯಲಿರುವ ನಮ್ಮ ರಾಜ್ಯದ ಎಸ್ಎಸ್ಎಲ್‌ಸಿ ಮಕ್ಕಳು 325. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಗಡಿಭಾಗದಲ್ಲಿ ಪ್ರವಾಹ ಆತಂಕ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಪ್ರವಾಹ ಬಂದರೂ ಅಂತಹ ಮಕ್ಕಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 8 ವಲಯಗಳಿದ್ದು, 17 ಪರೀಕ್ಷಾ ಕೇಂದ್ರಗಳಿವೆ. ಹಾಗೇ ಹುಕ್ಕೇರಿಯಲ್ಲಿ 25, ನಿಪ್ಪಾಣಿಯಲ್ಲಿ 12, ಮೂಡಲಗಿಯಲ್ಲಿ 18, ಕಾಗವಾಡದಲ್ಲಿ 6, ಅಥಣಿಯಲ್ಲಿ 21, ಗೋಕಾಕದಲ್ಲಿ 15, ರಾಯಬಾಗದಲ್ಲಿ 18 ಹೀಗೆ ಒಟ್ಟು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 132 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಪರೀಕ್ಷೆಗೆ ಬರುವಂತ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಕ್ರಿನಿಂಗ್, ಮಾಸ್ಕ್, ಸ್ಯಾನಿಟೈಸರ್ ನೀಡಲಾಗುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುವುದು. ಪಾಲಕರು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಂದು ಬಿಡುವಾಗ ಸಾಮಾಜಿಕ ಅಂತರವಿರಲಿ. ಹಾಗೇ ಪರೀಕ್ಷಾ ಕೇಂದ್ರದ ಒಳಗಡೆ ಪೋಷಕರಿಗೆ ಪ್ರವೇಶವಿಲ್ಲ. ಪಾಲಕರು-ಮಕ್ಕಳು ಯಾರೂ ಕೂಡ ಕೊರೊನಾ ಸಲುವಾಗಿ ಹೆದರುವ ಅವಶ್ಯಕತೆ ಇಲ್ಲ. ನಮ್ಮ ಸಿಬ್ಬಂದಿ ಮುಂಜಾಗ್ರತೆ ವಹಿಸಿದ್ದಾರೆ ಎಂದು ಅಭಯ ನೀಡಿದರು.