ಕರ್ನಾಟಕ

karnataka

ಸರ್ಕಾರ ನೇಕಾರರ ಬದುಕು ಕಸಿದುಕೊಳ್ಳಬಾರದು: ಗಜಾನನ ಗುಂಜೇರಿ

By

Published : Aug 10, 2023, 5:03 PM IST

''ಸರ್ಕಾರವು ನೇಕಾರರ ಬದುಕು ಕಸಿದುಕೊಳ್ಳಬಾರದು'' ಎಂದು ಉತ್ತರ ಕರ್ನಾಟಕ ವೃತ್ತಿಪರ ನೇಕಾರ ಹೋರಾಟ ಸಮಿತಿ ಸಂಚಾಲಕ ಗಜಾನನ ಗುಂಜೇರಿ ಆಕ್ರೋಶ ವ್ಯಕ್ತಪಡಿಸಿದರು.

Gajana Gunjeri
ಗಜಾನನ ಗುಂಜೇರಿ ಅಸಮಾಧಾನ..

ಗಜಾನನ ಗುಂಜೇರಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ:''ನೇಕಾರರ ಬದುಕನ್ನು ಕಸಿದುಕೊಳ್ಳುವ ಕೆಲಸಕ್ಕೆ ಸರಕಾರ ಮುಂದಾಗಬಾರದು'' ಎಂದು ಉತ್ತರ ಕರ್ನಾಟಕ ವೃತ್ತಿಪರ ನೇಕಾರ ಹೋರಾಟ ಸಮಿತಿ ಸಂಚಾಲಕ ಗಜಾನನ ಗುಂಜೇರಿ ಆಗ್ರಹಿಸಿದರು.

ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಜಗತ್ತಿನ ಮಾನ ಮುಚ್ಚುವ ನೇಕಾರರ ಬದುಕು ಚಿಂತಾಜನಕವಾಗಿದೆ. ಕಳೆದ ಮೂರು ವರ್ಷಗಳಿಂದ ಮಳೆಯಿಂದಾಗಿ ನೆರೆ ಹಾವಳಿ, ಕೊರೊನಾ ಪರಿಣಾಮ ಹಾಗೂ ಕಚ್ಚಾ ನೂಲಿನ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ನೇಕಾರರ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದಿನ ತಿಂಗಳು 23ನೇ ತಾರೀಖು ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ'' ಎಂದರು.

2004- 06ರಲ್ಲಿ ಸಿದ್ದರಾಮಯ್ಯ ಅವರು ಡಿಸಿಎಂ ಆಗಿದ್ದಾಗ 1.25 ರೂ. ದರ ನಿಗದಿಪಡಿಸಲಾಗಿತ್ತು. ಬಳಿಕ 7.45 ರೂ.‌ ಪ್ರತಿ ಯೂನಿಟ್​ಗೆ ಹೆಚ್ಚಿಸಲಾಗಿದೆ. ಅಲ್ಲದೇ 70 ರೂ. ಇದ್ದ ಮಿನಿಮಯ ದರ 140ರೂ.ಗೆ ಏರಿಸಿದ್ದಾರೆ. ನೇಕಾರರಿಗೆ 10 ಎಚ್.ಪಿ. ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಅಲ್ಲದೇ ಹಿಂದಿನ ಬೊಮ್ಮಾಯಿ ಸರ್ಕಾರ ಕೂಡ 5 ಎಚ್.ಪಿ. ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಬಜೆಟ್​ನಲ್ಲಿ ಘೋಷಿಸಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಬಳಸಿಕೊಂಡು ಹಿಂದಿನ ಎಲ್ಲ ಸರ್ಕಾರಗಳು ನಮಗೆ ಅನ್ಯಾಯ ಮಾಡುತ್ತಿವೆ. ಸಿದ್ದರಾಮಯ್ಯನವರು ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ 10 ಎಚ್.ಪಿ. ವರೆಗೆ ವಿದ್ಯುತ್ ಉಚಿತ ಕೊಡಬೇಕು. ಜವಳಿ ಇಲಾಖೆಗೆ ಹೆಚ್ಚಿನ ಅನುದಾನ, ನೇಕಾರರನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು. ಶೂನ್ಯ ಬಡ್ಡಿ ದರದಲ್ಲಿ 5 ರಿಂದ 10 ಲಕ್ಷ ರೂಪಾಯಿ ಸಾಲ ನೀಡಬೇಕು. ಹೈಟೆಕ್ ಟೆಕ್ಸ್​ಟೈಲ್ ಕಾಲೇಜು, ಟೆಕ್ಸ್​ಟೈಲ್ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು'' ಎಂದು ಗಜಾನನ ಗುಂಜೇರಿ ಒತ್ತಾಯಿಸಿದರು.

ಕೋವಿಡ್ ವೇಳೆ 39 ನೇಕಾರರ ಆತ್ಮಹತ್ಯೆ:''ಸರ್ಕಾರದ ವಿವಿಧ ಇಲಾಖೆಗಳು ಖರೀದಿಸುವ ಬಟ್ಟೆಗಳನ್ನು ನೇಕಾರರಿಂದಲೇ ಖರೀದಿಸುವ ಕೆಲಸ ಮಾಡಬೇಕು. ನೇಕಾರರನ್ನು ಅಸಂಘಟಿತ ಕಾರ್ಮಿಕರಂತೆ ಪರಿಗಣಿಸಿ, ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ನಮಗೂ ಸಿಗಬೇಕು. ಕೋವಿಡ್ ವೇಳೆ 39 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೆ ನೇಕಾರರು ಆತ್ಮಹತ್ಯೆ ದಾರಿ ಹಿಡಿಯದಂತೆ ಸರ್ಕಾರ ನೋಡಿಕೊಳ್ಳಬೇಕು. ಅತೀ ಹೆಚ್ಚು ತೆರಿಗೆ ತುಂಬುವ ನಮಗೆ ಯಾವುದೇ ಯೋಜನೆ, ಅನುದಾನವಿಲ್ಲದೇ ಕಂಗಾಲಾಗಿದ್ದೇವೆ. ಗುಜರಾತ್, ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ನಮಗೆ ಯಾವುದೇ ರೀತಿ ಸೌಲಭ್ಯಗಳು ಇಲ್ಲ. ಜಿಲ್ಲೆಯಲ್ಲಿ 30 ಸಾವಿರ ಮಗ್ಗಗಳಿದ್ದು, ಒಂದೂವರೆ ಲಕ್ಷ ಜನ ಅವಲಂಬಿತರಾಗಿದ್ದಾರೆ. ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು'' ಎಂದು ಗಜಾನನ ಗುಂಜೇರಿ ಒತ್ತಾಯಿಸಿದರು.

''ಹಿಂದಿನ ಸರ್ಕಾರವೂ ನಮ್ಮನ್ನು ತುಳಿದಿತ್ತು. ಈಗಿನ ಸರ್ಕಾರವೂ ಅದನ್ನೇ ಮಾಡುತ್ತಿದೆ. ಹಾಗಾಗಿ ನೇಕಾರರು ಬೀದಿಗೆ ಬರುವ ಸ್ಥಿತಿ‌ ನಿರ್ಮಾಣವಾಗಿದೆ. 2004-06ರ ವಿದ್ಯುತ್ ಆದೇಶ ಜಾರಿಗೆ ತಂದು ನೇಕಾರರನ್ನು ಬದುಕಿಸಬೇಕು. ಪ್ರಚಾರದಲ್ಲಿ ನುಡಿದಂತೆ ಸಿಎಂ ಸಿದ್ದರಾಮಯ್ಯ ಅವರು ನಡೆದುಕೊಳ್ಳಬೇಕು" ಎಂದು ವೆಂಕಟೇಶ ಸೊಂಟಕ್ಕಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲೋಹಿತ್ ಮೋರಕರ್, ವಿನೋದ ಬಂಗೋಡಿ, ಆನಂದ ಉಪರಿ, ರಮೇಶ ಪಾಟೀಲ, ಬಸವರಾಜ ಢವಳಿ ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ, ಕಿರುಬ ಬೆಕ್ಕು: ನಿಟ್ಟುಸಿರು ಬಿಟ್ಟ ಜನ

ABOUT THE AUTHOR

...view details