ಚಿಕ್ಕೋಡಿ: ಸರ್ಕಾರದ ಹೊಸ ಶಿಕ್ಷಣ ನೀತಿಯಿಂದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬೇಕೆಂಬ ಮಕ್ಕಳ ಕನಸು ನನಸಾಗುತ್ತಿಲ್ಲ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಅಡಿಯಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ.
ಹೌದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಮೂಡಲಗಿ, ಗೋಕಾಕ್, ಅಥಣಿ, ಕಾಗವಾಡ ಹೀಗೆ ಎಂಟು ತಾಲೂಕುಗಳಲ್ಲಿ ಒಟ್ಟು 1,430 ಸೀಟುಗಳಿಗೆ 644 ಅರ್ಜಿ ಸಲ್ಲಿಕೆಯಾಗಿವೆ.
ಕಳೆದೆರಡು ವರ್ಷದಿಂದ ಸರ್ಕಾರ ಆರ್‌ಟಿಇ ಯೋಜನೆಯಲ್ಲಿ ಕೆಲವೊಂದು ಬದಲಾವಣೆ ತಂದಿದೆ. ಇಂತಿಷ್ಟೇ ವರ್ಷದ ಮಗು ಈ ದಿನಾಂಕದಿಂದ ಈ ದಿನಾಂಕದ ಒಳಗಡೆ ಹುಟ್ಟಿರಬೇಕು. ತಾವು ಇರುವ ಪ್ರದೇಶದಿಂದ ಒಂದು ಕಿ.ಮೀ ಅಂತರದಲ್ಲಿ ಸರ್ಕಾರಿ ಶಾಲೆ ಇದ್ದರೆ ಆ ಮಗು ಸರ್ಕಾರಿ ಶಾಲೆಗೆ ಹೋಗಬೇಕು. ಗ್ರಾಮೀಣ ಪ್ರದೇಶದಲ್ಲಿ ಇದ್ದ ಮಗು ತಾಲೂಕು ಪ್ರದೇಶ ಶಾಲೆಗಳಲ್ಲಿ ಆರ್‌ಟಿಇ ಮೂಲಕ ಕಲಿಯಲು ಅವಕಾಶವಿಲ್ಲ. ಹೀಗೆ ಹಲವಾರು ಬದಲಾವಣೆ ಮಾಡಿದ್ದರಿಂದ ಕೆಲ ಪಾಲಕರು ಆರ್‌ಟಿಇ ಸೀಟುಗಳಿಗೆ ಅರ್ಜಿ ಸಲ್ಲಿಕೆ ಮಾಡುತ್ತಿಲ್ಲ.
ಈ ಬಾರಿ ಕೊರೊನಾ ಹಿನ್ನೆಲೆ ಕೆಲ ಪಾಲಕರು ಶಾಲೆಗಳ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ ಈ ಬಾರಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬೇಕೆಂಬ ಮಕ್ಕಳ ಕನಸು ನನಸಾಗುತ್ತಿಲ್ಲ.