ಚಿಕ್ಕೋಡಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ 21 ದಿನಗಳ ಲಾಕ್‍ಡೌನ್ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ, ಮಾರಕ ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ ಎಂದು ರಾಯಬಾಗ ಶಾಸಕ ಡಿ.ಎಂ.ಐಹೊಳೆ ಕರೆ ನೀಡಿದರು.
ರಾಯಬಾಗ ಪಟ್ಟಣದ ಮಿನಿ ವಿಧಾನಸೌಧ ಸಭಾ ಭವನದಲ್ಲಿ ತಾಲೂಕು ಪಂಚಾಯತಿಯಿಂದ ಹಮ್ಮಿಕೊಂಡಿದ್ದ ಕೋವಿಡ್-19 ಹರಡದಂತೆ ಮುಂಜಾಗೃತಾ ಕ್ರಮದ ಕುರಿತು ತುರ್ತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧಿಕಾರಿಗಳು ತಾಲೂಕಿನ ಪಟ್ಟಣದ ಮತ್ತು ಗ್ರಾಮೀಣ ಜನರಿಗೆ ಕೊರೊನಾ ಸೋಂಕಿನ ಕುರಿತು ಇನ್ನು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು. ದಿನಸಿ ಸಾಮಾಗ್ರಿ ವ್ಯಾಪಾರಸ್ಥರಿಗೆ ಮತ್ತು ತರಕಾರಿ ಮಾರುವವರಿಗೆ ವ್ಯಾಪಾರ ಮಾಡಲು ಇನ್ನು 1-2 ಗಂಟೆ ಹೆಚ್ಚಿನ ಸಮಯ ನೀಡಿದರೆ ಜನದಟ್ಟಣೆ ನಿಯಂತ್ರಿಸಲು ಸಾಧ್ಯ. ಮನೆ, ಮನೆಗೆ ತರಕಾರಿ ಮಾರಾಟ ಮಾಡಲು ಸೂಚನೆ ನೀಡಬೇಕೆಂದರು.
ಕೇಂದ್ರ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯವನ್ನು ಅಧಿಕಾರಿಗಳು ಸರಿಯಾಗಿ ಮಾಡುವಂತೆ ಮನವಿ ಮಾಡಿದ ಅವರು, ಪಟ್ಟಣದಲ್ಲಿರುವ ಚರಂಡಿಗಳನ್ನು ಸ್ವಚ್ಛತೆ ಮಾಡಿಸುವಂತೆ ಪ.ಪಂ.ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.