ಚಿಕ್ಕೋಡಿ:ಎರಡು ದಿನಗಳಿಂದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರು 7 ಅಡಿವರೆಗೆ ಏರಿಕೆಯಾಗಿದೆ.
ಕೃಷ್ಣಾ ನದಿಯಲ್ಲಿ ನೀರು ಹೆಚ್ಚಳ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. 2,18,000ಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿ ಒಳಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,85,875 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 33,088 ಕ್ಯೂಸೆಕ್ ನೀರು ಹೀಗೆ ಒಟ್ಟು 2,18,000 ಕ್ಯೂಸೆಕ್ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಮಹಾರಾಷ್ಟ್ರದ ಕೊಯ್ನಾ-80 ಮಿ.ಮೀ., ನವಜಾ-89 ಮಿ.ಮೀ., ಮಹಾಬಲೇಶ್ವರ-105 ಮಿ.ಮೀ., ವಾರಣಾ-50 ಮಿ.ಮೀ., ಕಾಳಮ್ಮವಾಡಿ-48 ಮಿ.ಮೀ., ರಾಧಾನಗರಿ - 64 ಮಿ.ಮೀ., ಪಾಟಗಾಂವ-95 ಮಿ.ಮೀ. ಮಳೆಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ 87%, ವಾರಣಾ ಜಲಾಶಯ 92%, ರಾಧಾನಗರಿ ಜಲಾಶಯ 99%, ಕಣೇರ ಜಲಾಶಯ 89%, ಧೂಮ ಜಲಾಶಯ 90%, ಪಾಟಗಾಂವ 100%, ದೂಧಗಂಗಾ 93% ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 2,08,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.
ನದಿ ತೀರದ ಗ್ರಾಮಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿದ್ದಾರೆ.