ಬೆಳಗಾವಿ:ಪರಕೀಯರ ದಾಳಿಯಿಂದ ಆಘಾತಕ್ಕೊಳಗಾದ ಭಾರತವನ್ನು ಮತ್ತೊಮ್ಮೆ ಜಗತ್ತಿನ ಸರ್ವಶಕ್ತ ದೇಶವಾಗಿಸಲು ಮತ್ತು ವಿಶ್ವಗುರುವಾಗಲು ಸಂತರ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಕೆಎಲ್‍ಇ ಜೀರಗೆ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಆಯೋಜಿಸಲಾದ ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಏರ್ಪಡಿಸಿದ ಸಂತ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸ್ವಾತಂತ್ರ ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ದೇಶದ ಭವ್ಯತೆಯನ್ನು ಸಾರುವ ಬದಲು, ಜಾತ್ಯತೀತ ಎಂಬ ಹುಸಿ ಸಿದ್ದಾಂತಕ್ಕೆ ಜೋತು ಬಿದ್ದರು. ದೇಶವನ್ನು ಲೂಟಿ ಹೊಡೆದ ಖಿಲ್ಜಿ, ಮೋಘಲರು, ಮತ್ತು ಸಾಕಷ್ಟು ಮಾಹಿತಿಗಳನ್ನು ಪಠ್ಯದ ಮೂಲಕ ಶಿಕ್ಷಣ ನೀಡಿರುವುದು ಭಾರತೀಯರಲ್ಲಿ ಗುಲಾಮ ಮನಸ್ಥಿತಿ ಬೇರೂರುವಂತೆ ಮಾಡಿದೆ ಎಂದರು.
300 ವರ್ಷ ಆಳಿದ ವಿಜಯನಗರದ ಸಾಮ್ರಾಜ್ಯದ ಬಗ್ಗೆ ನಮಗೆ ಕೇವಲ ಬೆರಳಣಿಕೆಯ ಸಾಲುಗಳಲ್ಲಿ ಮಾತ್ರ ಮಾಹಿತಿ ಪಠ್ಯದಲ್ಲಿ ದೊರೆಯುತ್ತದೆ. ಮೌರ್ಯರು, ಚಾಲುಕ್ಯರು ಭಾರತವನ್ನು ಆರ್ಥಿಕ, ಶೈಕ್ಷಣಿಕ, ಕಲೆ ಸೇರಿದಂತೆ ಎಲ್ಲ ಕ್ಷೇತ್ರಗಳಿಂದಲೂ ಶ್ರೀಮಂತ ರಾಷ್ಟ್ರ ಎಂದು ಜಗತ್ತಿಗೆ ಸಾರಿದರು. ಆದರೂ ಇವರ ಬಗ್ಗೆ ನಮ್ಮ ಶಿಕ್ಷಣ ವ್ಯವಸ್ಥೆ ಮೂಲಕ ಮಕ್ಕಳು ಕಲಿಯಲು ಅವಕಾಶ ನೀಡದಂತೆ ಎಡ ಪಂಥಿಯರು ತಂತ್ರ ರೂಪಿಸಿ ಭಾರತೀಯರಲ್ಲಿ ಭಾರತದ ಬಗ್ಗೆ ಅಸಹ್ಯ ಹುಟ್ಟುವಂತೆ ತಂತ್ರ ರೂಪಿಸಿದ್ದಾರೆ. ಅದರ ಫಲವಾಗಿಯೆ ಪ್ರಸಕ್ತ ದಿನಗಳಲ್ಲಿ ದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆಗಳು ಜರುಗಿರುವುದನ್ನು ಕಾಣುತ್ತೇವೆ ಎಂದು ತಿಳಿಸಿದರು.
ಶ್ರೀರಾಮ ಮಂದಿರ ನಿರ್ಮಾಣ ಕೇವಲ ರಾಮನ ಆರಾಧನೆಗೆ ಮೀಸಲಾಗಿಲ್ಲ. ಶ್ರೀರಾಮ ಮಂದಿರವು ಮತಾಂತರ, ಅಸ್ಪೃಶ್ಯತೆ, ಜಾತೀಯತೆ ಸೇರಿದಂತೆ ಸಮಾಜಕ್ಕೆ ಅಂಟಿದ ಅನೇಕ ಸಾಮಾಜಿಕ ಪಿಡುಗುಗಳಿಗೆ ತೊಡೆದು ಹಾಕುವ ರಾಷ್ಟ್ರ ಮಂದಿರವಾಗಲಿದೆ. ಆದ್ದರಿಂದ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಎಲ್ಲ ಸಾಧು ಸಂತರು ಮತ್ತು ಸ್ವಾಮೀಜಿಗಳು ಜೊತೆಗೂಡಬೇಕು ಎಂದು ಹೇಳಿದರು.
ನಿಡಸೋಸಿಯ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸೇರಿದಂತೆ ಮತ್ತಿತರರು ಹಾಜರಿದ್ದರು.