ಬೆಳಗಾವಿ: ಶನಿವಾರ ಮೊಹರಂ ಕೊನೆ ದಿನ. ಮೊಹರಂ ಹಿಂದೂ - ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬವನ್ನು ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಮೊಹರಂ ಹಬ್ಬ ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬವಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ, ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ.
ಇನ್ನು ಮುಸ್ಲಿಂ ಬಂಧುಗಳೇ ಇಲ್ಲದ ಸವದತ್ತಿ ತಾಲೂಕಿನ ಪುಟ್ಟ ಗ್ರಾಮ ಹರ್ಲಾಪುರದಲ್ಲಿ ಹಿಂದೂಗಳೇ ಮೊಹರಂ ಆಚರಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಇಂದು ಇಲ್ಲಿ ಪಂಜಾಗಳಿಗೆ ಭಕ್ತರು ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿರುವುದು, ನೈವೇದ್ಯ ಅರ್ಪಿಸುತ್ತಿರುವುದು, ಇನ್ನೂ ಕೆಲವರು ಹರಕೆ ತೀರಿಸುತ್ತಿರುವ ದೃಶ್ಯಗಳು ಕಂಡು ಬಂದವು.
ಈ ಊರಲ್ಲಿ ಮುಸ್ಲಿಮರ ಒಂದೂ ಮನೆ ಕೂಡ ಇಲ್ಲಿಲ್ಲ. ಭಾವೈಕ್ಯತೆ ಹೆಸರಾದ ಈ ಊರಿನಲ್ಲಿ ಹಿಂದೂಗಳೇ ತಮ್ಮ ಸ್ವಂತ ಹಣದಿಂದ ಫಕೀರಸ್ವಾಮಿ ದರ್ಗಾ ಕಟ್ಟಿದ್ದಾರೆ. ಅಲ್ಲಿಯೇ ಪಂಜಾಗಳನ್ನು ಪ್ರತಿಷ್ಠಾಪಿಸಿ, ಪೂಜೆ – ಪುನಸ್ಕಾರಗಳನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಪಂಜಾಗಳನ್ನು ಕೂರಿಸುವುದು, ಪೂಜಿಸುವುದು, ಡೋಲಿಗಳನ್ನು ಸಿದ್ಧಪಡಿಸುವುದು ಹಾಗೂ ಮೊಹರಂ ಕಡೇ ದಿನದಂದು ಅವುಗಳ ಮೆರವಣಿಗೆ ಸೇರಿ ಎಲ್ಲ ವಿಧಿ ವಿಧಾನಗಳನ್ನು ಮಾಡುವುದು ಹಿಂದೂಗಳೇ ಎಂಬುದು ವಿಶೇಷ.
ಇಲ್ಲಿನ ಹಿರಿಯರ ಪ್ರಕಾರ, ಹಿಂದೆ ಮುಸ್ಲಿಂ ಸಮುದಾಯದ ಫಕೀರರೊಬ್ಬರು ಇಲ್ಲಿ ವಾಸವಿದ್ದರು. ಅವರು ನಿತ್ಯ ನಾಲ್ಕು ದೇವರಿಗೆ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು. ಅವರ ನಿಧನರಾದ ನಂತರ ಇಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಿ, ಘೋರಿ ಕಟ್ಟಲಾಯಿತು. 11 ವರ್ಷಗಳ ಹಿಂದೆ ಅದಕ್ಕೆ ಹೊಂದಿಕೊಂಡು ದರ್ಗಾ ಕೂಡ ನಿರ್ಮಿಸಲಾಗಿದೆ. ಅಲ್ಲಿಯೇ ಪ್ರತಿವರ್ಷ ಪಂಜಾಗಳನ್ನು ಪ್ರತಿಷ್ಠಾಪಿಸುತ್ತ ಬರಲಾಗಿದೆ.
ಈ ಕುರಿತು ಗ್ರಾಮಸ್ಥರಾದ ಬಸಪ್ಪ ವಕ್ಕುಂದ ಈಟಿವಿ ಭಾರತದ ಜೊತೆ ಮಾತನಾಡಿ, ಮುಸ್ಲಿಂರಿಗಿಂತ ಹೆಚ್ಚು ಸಂಭ್ರಮದಿಂದ ನಮ್ಮೂರಲ್ಲಿ ಮೊಹರಂ ಆಚರಿಸುತ್ತೇವೆ. ಐದು ಕೈ ದೇವರು ಹೊರುವವರು ಹಿಂದೂಗಳೇ. ಆದರೆ, ಮುಸ್ಲಿಮರ ಭಾಷೆ ಮಾತ್ರ ನಮಗೆ ಬರುವುದಿಲ್ಲ. ಹಾಗಾಗಿ ಹರ ಹರ ಮಹಾದೇವ ಎಂದು ಘೋಷಣೆ ಕೂಗುತ್ತಾ ಗ್ರಾಮದಲ್ಲಿ ಮೆರವಣಿಗೆ ನಡೆಸುತ್ತೇವೆ ಎಂದರು.