ಕರ್ನಾಟಕ

karnataka

ETV Bharat / state

ಚಿಂಚಲಿ‌‌ ಮಾಯಕ್ಕ ದರ್ಶನಕ್ಕೆ ಹರಿದು‌ ಬಂದ ಭಕ್ತ ಸಮೂಹ... ಹೀಗಿದೆಯಂತೆ ದೇವಿಯ ಪವಾಡ! - news kannada

21 ನೇ ಶತಮಾನದಲ್ಲೂ ಕೂಡಾ ಅಪಾರ ಸಂಖ್ಯೆಯಲ್ಲಿ ಕರ್ನಾಟಕ ಗಡಿ ಪ್ರದೇಶದ ಈ ದೇವಾಲಯಕ್ಕೆ ಮಹಾರಾಷ್ಟ್ರದಿಂದ ಭಕ್ತರು ಎತ್ತಿನ ಗಾಡಿಯ ಮೂಲಕ ಹಾಡುತ್ತಾ ಕುಣಿಯತ್ತಾ ದೇವಿಯ ದರ್ಶನ ಪಡೆಯಲು ಬರುತ್ತಾರೆ.

ಚಿಂಚಲಿ‌‌ ಮಾಯಕ್ಕ ದರ್ಶನಕ್ಕೆ ಹರಿದು‌ ಬಂದ ಭಕ್ತ ಸಮೂಹ

By

Published : Feb 21, 2019, 2:06 PM IST

ಚಿಕ್ಕೋಡಿ: ಉತ್ತರ ಕರ್ನಾಟಕ‌ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾಧ್ಯ ಶಕ್ತಿ ದೇವತೆ ಚಿಂಚಲಿ ಮಾಯಕ್ಕ ದೇವಿ. ಭಾರತ ಹುಣ್ಣಿಮೆ ನಂತರ ಬರುವ ಹಸ್ತಾ ನಕ್ಷತ್ರದ ಶುಭ ಗಳಿಗೆಯಲ್ಲಿ ಜರಗುವ ಜಾತ್ರೆ ಇದಾಗಿದ್ದು, ಉತ್ತರ ಕರ್ನಾಟಕದಲ್ಲಿಯೇ ದೊಡ್ಡ ಜಾತ್ರೆ ಎಂದು ಖ್ಯಾತಿ ಪಡೆದಿದೆ.

ಫೆ. 19 ರಿಂದ ಆರಂಭವಾಗಿರುವ ಜಾತ್ರೆ ಫೆ. 26ರವರೆಗೆ ಜರುಗಲಿದ್ದು, ಜಾತ್ರೆಗೆ ಸುಮಾರು 3 ಲಕ್ಷಕ್ಕಿಂತ ಹೆಚ್ಚು ಭಕ್ತರು ನೆರೆಯ ಮಹಾರಾಷ್ಟ್ರ, ಗೋವಾ, ತಮಿಳನಾಡು, ಆಂಧ್ರ ಪ್ರದೇಶದ, ದೆಹಲಿ ಹೀಗೆ ಇತರ ರಾಜ್ಯಗಳಿಂದ ಆಗಮಿಸುತ್ತಾರೆ. ಫೆ. 23 ರಂದು ಮಹಾ ನೈವೇದ್ಯ ಇದ್ದು, ಈ ದೇವಿಗೆ ಮಹಾಕಾರತಿ, ಮಹಾಕಾಳಿ, ಮಾಯವ್ವಾ ಎಂಬೆಲ್ಲ ಹೆಸರಿನಿಂದ ಪೂಜಿಸಲ್ಪಡುವ ಮಾಯಕ್ಕಾ ದೇವಿಯ ಜಾತ್ರೆ ಸಂಭ್ರಮದಲ್ಲಿ ಚಿಂಚಲಿ ಗ್ರಾಮ ಇದೆ.

ಪೌರಾಣಿಕ ಹಿನ್ನೆಲೆ:

ದೇವಿಯು ಮಹಾರಾಷ್ಟ್ರದ ಮಾನದೇಶ (ಕೊಂಕಣ)ದಿಂದ ಬಂದವಳು ಎಂದು ಹೇಳುತ್ತಾರೆ. ಕೀಲ ಮತ್ತು ಕಟ್ಟರೆಂಬ ರಾಕ್ಷಸರನ್ನು ಬೆನ್ನಟ್ಟಿ ಬಂದು ಚಿಂಚಲಿಯಲ್ಲಿ ಅವರನ್ನು ಸಂಹರಿಸಿ ಅಲ್ಲಿಯೇ ನೆಲೆಯೂರಿದ್ದಾಳೆಂದು ಐತಿಹಾಸಿಕ ಕಥೆಗಳು ಹೇಳುತ್ತವೆ. ಭಕ್ತರು ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ ಕುಣಿಯುವುದು ಇಲ್ಲಿನ ವಿಶೇಷ.

ಹಿರಿಯರ ಪ್ರಕಾರ ಚಿಂಚಲಿಯಲ್ಲಿ ಹಿರಿದೇವಿ ಮೂಲ ದೇವತೆ. ಇವಳೇ ಗ್ರಾಮ ದೇವತೆ. ಮಾಯಕ್ಕಾ ದೇವಿ ಹಿರಿದೇವಿಯ ಆಶ್ರಯ ಪಡೆದು ಚಿಂಚಲಿಯಲ್ಲಿ ನೆಲೆಸಿದಳು. ಅದಕ್ಕಾಗಿ ಮೊದಲ ಪ್ರಾಶಸ್ತ್ಯ ಹಿರಿದೇವಿಗೆ ಸಲ್ಲುತ್ತದೆ. ಈಗಲೂ ಮೊದಲು ಹಿರಿದೇವಿ ದರ್ಶನ ಮಾಡಿ ನೈವೇದ್ಯ ಸಲ್ಲಿಸಿ ನಂತರ ಮಾಯಕ್ಕ ದೇವಿಗೆ ನೈವೇದ್ಯ ಸಲ್ಲಿಸುತ್ತಾರೆ ಭಕ್ತರು.

ಚಿಂಚಲಿ‌‌ ಮಾಯಕ್ಕ ದರ್ಶನಕ್ಕೆ ಹರಿದು‌ ಬಂದ ಭಕ್ತ ಸಮೂಹ

ದೇವಿಯ ಪವಾಡ:

ಒಂದು ದಿನ‌ ದೇವಿಯು ಗ್ರಾಮದ ಹೊರವಲಯದ ಹಳ್ಳದ ಹತ್ತಿರ ಹೋದಾಗ ಅಲ್ಲಿ ಒಬ್ಬ ಕುರಿ ಕಾಯುವನ ಹತ್ತಿರ ಹೋಗಿ ಕುಡಿಯಲು ಕುರಿಯ ಹಾಲು ಕೇಳಿದಳು. ಅದಕ್ಕೆ ಕುರಿ ಕಾಯುವವನು ಕೊಡುವುದಿಲ್ಲ ಎಂದು ನಿರಾಕರಿಸಿದನಂತೆ. ಆಗ ಮಾಯಕ್ಕ ದೇವಿ ತನ್ನ ಶಕ್ತಿಯಿಂದ ಹಳ್ಳವನೆಲ್ಲ ಹಾಲಾಗಿ ಹರಿಯುವಂತೆ ಮಾಡಿದಳಂತೆ. ಇಂದಿಗೂ ಆ ಹಳ್ಳಕ್ಕೆ 'ಹಾಲು ಹಳ್ಳ' ಎಂಬ ಹೆಸರಿನಿಂದ ಕರೆಯುತ್ತಾರೆ. ಅದರ ಪಕ್ಕದಲ್ಲಿ ಕುರಿ ಕಾಯುತ್ತಿದ್ದವರಲ್ಲಿ ಕುರಿಯ ಉಣ್ಣೆ ಕೇಳಿದ್ದಕ್ಕೆ ಅವರು ನಿರಾಕರಿಸಿದ್ದರಿಂದ ಕೋಪದಿಂದ ದೇವಿ ನೀಡಿದ ಶಾಪದಿಂದ ಕುರಿಗಳೆಲ್ಲ ಕಲ್ಲಾಗಿ ಬಿದ್ದವಂತೆ. ಇಂದಿಗೂ ಹಾಲು ಹಳ್ಳದ ದಡದಲ್ಲಿ ಗುಂಪು ಗುಂಪಾಗಿ‌ ಬಿದ್ದ ಕಲ್ಲುಗಳನ್ನು ಉಣ್ಣೆ ಮುತ್ತಪ್ಪನ ಕಲ್ಲುಳಿ ಎಂಬ ಹೆಸರಿನಿಂದ ಕರೆಯುತ್ತಾರೆ.

ದೇವಿಯ ಅಲಂಕಾರ:

ತೆಲೆಯ ಮೇಲೆ ಕಿರೀಟ, ಅದರ ಮೇಲೆ ಐದು ಹೆಡೆಯ ಸರ್ಪ, ನಾಲ್ಕು ಕೈಗಳ ತುಂಬಾ ಹಸಿರು ಬಳೆಗಳು, ಮೈತುಂಬಾ ಬಂಗಾರದ ಒಡವೆಗಳು, ಬಲಗೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ತ್ರಿಶೂಲ ಹಾಗೂ ಎಡಗೈಯಲ್ಲಿ ಹಾವು ಕಂಡು ಬರುತ್ತದೆ. ದೇವಿಯನ್ನು ಶಕ್ತಿ ದೇವಿ ಹಾಗೂ ಪಾರ್ವತಿ ಅವತಾರ ಎನ್ನುತ್ತಾರೆ ಇಲ್ಲಿನ ಹಿರಿಯರು.

ದೇವಸ್ಥಾನ ಮುಖ ಪೂರ್ವಕ್ಕೆ ಇದ್ದು 50 ಅಡಿ ಎತ್ತರದ ಮಹಾದ್ವಾರ ಇದೆ. ದೇವಿಯ ಮುಖ್ಯ ವಾಹನ ಕುದುರೆ. ದೇವಿಯ ವಿಗ್ರಹಗಳು, ಪಲ್ಲಕ್ಕಿ, ಉತ್ಸವ ಮೂರ್ತಿ ಎಲ್ಲವೂ ಅಶ್ವಾರೂಢವಾಗಿರುವುದು ವಿಶೇಷ. ಭಕ್ತರು ಮಾಯಕ್ಕನ ಕುದುರೆ ಮುಖಕ್ಕೆ ಭಂಡಾರ ಲೇಪಿಸಿ ನಂತರ ಹಣೆಗೆ ಲೇಪಿಸುವುದು ರೂಢಿ.

21 ಶತಮಾನದಲ್ಲೂ ಕೂಡಾ ಅಪಾರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಭಕ್ತರು ಎತ್ತಿನ ಗಾಡಿಯ ಮೂಲಕ ಹಾಡುತ್ತಾ ಕುಣಿಯತ್ತಾ ದೇವಿಯ ದರ್ಶನ ಪಡೆಯಲು ಬರುತ್ತಾರೆ.‌ ಹಿರಿಯರು ರೂಢಿಸಿರುವ ವಾಡಿಕೆಯಂತೆ ತೆಲೆಮಾರುಗಳಿಂದ ಬಂದಿರುವಂತ ಆಚರಣೆ ಭಕ್ತಿಯನ್ನು ಬಿಡದೆ ಪ್ರತಿ ವರ್ಷ ಭಾರತ ಹುಣಿಮೆ ನಂತರ ಬರುವ ಹಸ್ತಾ ಶುಭ ಘಳಿಗೆಯಲ್ಲಿ ಬಂದು ದೇವಿಯ ದರ್ಶನ ಪಡೆಯುತ್ತಾರೆ ಗಡಿ ಭಾಗದ ಭಕ್ತರು.

ABOUT THE AUTHOR

...view details