ಬೆಳಗಾವಿ: ಮಾರ್ಚ್ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಸಚಿವ ಸಂಪುಟ ಪುನಾರಾಚನೆ ಆಗಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಸಚಿವ ಸಂಪುಟ ಪುನಾರಾಚನೆ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಚಿವ ಸ್ಥಾನ ತಪ್ಪಿದವರಿಗೆ ಪುನಾರಚನೆ ವೇಳೆ ಅವಕಾಶ ಸಿಗುವ ವಿಶ್ವಾಸವಿದೆ. ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಉಪಚುನಾವಣೆ ನಡೆಯಬೇಕಿದೆ. ಇದಾದ ಮೇಲೆ ತಾ.ಪಂ, ಜಿ.ಪಂ ಚುನಾವಣೆ ನಡೆಯಲಿದೆ. ಬಳಿಕ ಮತ್ತೊಮ್ಮೆ ಸಂಪುಟ ಪುನಾರಚನೆ ಆಗಲಿದೆ ಎಂದು ಹೇಳಿದರು.
ಇಂದು ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೆಚ್.ವಿಶ್ವನಾಥ್, ಮಹೇಶ್ ಕುಮಟಳ್ಳಿ, ಮುನಿರತ್ನ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬರುವ ದಿನಗಳಲ್ಲಿ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆ. ನಮ್ಮ ಟೀಂ ನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕಾಗಿದೆ. ಹೆಚ್.ವಿಶ್ವನಾಥ ಸಚಿವರಾಗಲು ಕಾನೂನು ತೊಡಕಿದೆ ಎಂದರು.
ಕಲಬುರಗಿಯಲ್ಲಿ ಬಿಜೆಪಿ ಸಂಘಟನೆಯಲ್ಲಿ ಮಾಲೀಕಯ್ಯ ಗುತ್ತೇದಾರ ಪಾತ್ರ ಪ್ರಮುಖವಾಗಿದೆ. ನನಗಿಂತ ಮಾಲೀಕಯ್ಯ ಆ ಭಾಗದಲ್ಲಿ ಪ್ರಭಾವ ಹೊಂದಿದ್ದಾರೆ. ಗುತ್ತೇದಾರ್ ಅವರಿಗೂ ಸಚಿವ ಸ್ಥಾನ ಸಿಗಬೇಕಿತ್ತು. ಸರ್ಕಾರ ಬರಲು ಯೋಗೇಶ್ವರ್ ಪ್ರಮುಖ ಮಾತ್ರ ವಹಿಸಿದ್ದರು. ಯೋಗೇಶ್ವರ್ಗೆ ಸಚಿವ ಸ್ಥಾನ ಕೊಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು.
ಬಿಎಸ್‌ವೈ ವಿರುದ್ಧ ಹೆಚ್.ವಿಶ್ವನಾಥ್ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೆಚ್.ವಿಶ್ವನಾಥ್ ಹಿರಿಯರು. ಅವರ ಮಾತುಗಳನ್ನು ಆಶೀರ್ವಾದ ಅಂದುಕೊಳ್ಳುತ್ತೇನೆ ಎಂದರು.
ಸರ್ಕಾರ ಕೇವಲ ಬೆಂಗಳೂರು, ಬೆಳಗಾವಿಗೆ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಉತ್ತರಿಸಿದ ಅವರು, ಸಂದರ್ಭಕ್ಕೆ ಅನುಗುಣವಾಗಿ ಸಂಪುಟದಲ್ಲಿ ಸ್ಥಾನಮಾನ ಸಿಗುತ್ತಿದೆ. ಲೋಪವನ್ನು ಸಿಎಂ ಸರಿಪಡಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಸಂಪುಟದಲ್ಲಿ ಅವಕಾಶ ಸಿಗುತ್ತಿರುವುದಕ್ಕೆ ಸಿಎಂ, ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ ಶಾಸಕರು