ಬೆಳಗಾವಿ:ಜಿಲ್ಲೆಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ.
ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ್ ಪಟ್ಟಣ ಭಾಗಶಃ ಮುಳುಗಡೆಯಾಗಿದೆ. ನಗರದಲ್ಲಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಮನೆ ಸಹ ಜಲಾವೃತಗೊಂಡಿದೆ. ಜಿಲ್ಲೆಯ ಜನಸಾಮಾನ್ಯರೂ ಧಾರಾಕಾರ ಮಳೆಯಿಂದ ಕಂಗಾಲಾಗಿದ್ದಾರೆ.
ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ನಗರದ ಶಾಲಾ-ಕಾಲೇಜುಗಳಿಗೂ ನೀರು ನುಗ್ಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಿಡಿಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 60 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಇದರಿಂದ ಗೋಕಾಕ ತಾಲೂಕಿನ ಕೊಣ್ಣೂರ, ಲೋಳಸೂರು ಗ್ರಾಮಗಳಿಗೆ ನೀರು ನುಗ್ಗಿದೆ. ಜನರು, ಸಾಮಾನು ಸರಂಜಾಮುಗಳ ಜತೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.
ಪ್ರವಾಹದ ಮಧ್ಯೆ ಸಿಲುಕಿದ ಗಂಡ-ಹೆಂಡತಿ:
ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದಲ್ಲಿ ದಂಪತಿ ಪ್ರವಾಹದ ಮಧ್ಯೆ ಸಿಲುಕಿದ್ದಾರೆ. ನಿನ್ನೆ ಬೆಳಗ್ಗೆ ತೋಟದ ಮನೆಗೆ ತೆರಳಿದ್ದ ವೇಳೆ ಪ್ರವಾಹ ಹೆಚ್ಚಾಗಿದೆ. ಬಳ್ಳಾರಿ ನಾಲಾದಿಂದ ಮನೆಯ ನಾಲ್ಕು ಭಾಗದಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ರೈತ ಕಾಡಪ್ಪ ಹಾಗೂ ಆತನ ಪತ್ನಿ ರತ್ನವ್ವ ಪ್ರವಾಹದ ಮಧ್ಯೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆಹಾರ-ನೀರು ಇಲ್ಲದೆ ಹೆಲಿಕಾಪ್ಟರ್ ಮೂಲಕ ನಮ್ಮನ್ನು ರಕ್ಷಿಸಿ ಎಂದು ಕಳೆದ 24 ಗಂಟೆಗಳಿಂದ ಗೋಗರೆಯುತ್ತಿದ್ದಾರೆ.