ಬೆಳಗಾವಿ:ಇಂದಿನಿಂದ ಇಲ್ಲಿನ ಸುವರ್ಣಸೌಧದಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರದ ಕಾವೇರಲಿದೆ. ಅಧಿವೇಶನದಲ್ಲಿ ಬರ, ವರ್ಗಾವಣೆ ದಂಧೆ ಆರೋಪ ಹಾಗೂ ಅನುದಾನದ ಕೊರತೆ ಸದ್ದು ಮಾಡಲಿವೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಸರ್ಕಾರದ ವಿರುದ್ಧ ಎರಡೂ ಪಕ್ಷಗಳು ಜಂಟಿಯಾಗಿ ಮುಗಿಬೀಳಲು ಮುಂದಾಗಿವೆ.
ಇತ್ತ ಪ್ರತಿಪಕ್ಷ ನಾಯಕನ ಆಯ್ಕೆಯ ಬಳಿಕ ಬಿಜೆಪಿಗೂ ಇದು ಮೊದಲ ಅಧಿವೇಶನವಾಗಿದೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಹುರುಪು ಬಂದಂತಾಗಿದೆ. ಹೀಗಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಸರ್ಕಾರದ ವಿರುದ್ಧ ಹಲವು ಅಸ್ತಗಳನ್ನು ಬಳಸಲು ಸಜ್ಜಾಗಿವೆ.
ವರ್ಗಾವಣೆ ದಂಧೆ ಆರೋಪ, ಬರ ನಿರ್ವಹಣೆ ವೈಫಲ್ಯದ ಅಸ್ತ್ರ:ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಬೆಳಗಾವಿ ಅಧಿವೇಶನದಲ್ಲಿ ಕಟ್ಟಿಹಾಕಲು ಬಿಜೆಪಿ ಮತ್ತು ಜೆಡಿಎಸ್ ಬಳಿ ವರ್ಗಾವಣೆ ದಂಧೆ ಆರೋಪ ಪ್ರಬಲ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೇ ಪ್ರತಿಪಕ್ಷಗಳು ವರ್ಗಾವಣೆಯ ಆರೋಪ ಮಾಡಿದ್ದವು. ಇದೀಗ ಅಧಿವೇಶನದಲ್ಲಿ ಇದೇ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ರೆಡಿಯಾಗಿವೆ. ಹೆಚ್.ಡಿ.ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪದ ಬಗ್ಗೆ ಸರ್ಕಾರದ ಮೇಲೆ ಸಮರ ಸಾರುವ ಸಾಧ್ಯತೆ ಇದೆ.
ರಾಜ್ಯದಲ್ಲಿ 233 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ ಬರ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿರುವ ಆರೋಪವೂ ಇದೆ. ಈ ಸಂಬಂಧ ಬಿಜೆಪಿ, ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧವಾಗಿದೆ. ಕುಡಿಯುವ ನೀರಿನ ಕೊರತೆ ಇದೆ. ಬೆಳೆ ನಷ್ಟ ರೈತರಿಗೆ ಪರಿಹಾರ ಸಿಕ್ಕಿಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್ ಕುರಿತು ಸರ್ಕಾರದ ಕಿವಿ ಹಿಂಡಲಿದೆ. ಬರ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸದನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಹೋರಾಟಕ್ಕೆ ಸಜ್ಜಾಗಿವೆ.
ಸಚಿವ ಜಮೀರ್ ಹೇಳಿಕೆ ವಿರುದ್ಧ ಹೋರಾಟ:ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸ್ಪೀಕರ್ ಮುಂದೆ ಬಿಜೆಪಿ ನಾಯಕರು ಕೈಮುಗಿದು ನಿಲ್ಲಬೇಕಾದ ಪರಿಸ್ಥಿತಿ ಇದೆ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಕೊಟ್ಟ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಶಾಸಕರು ಪ್ರತಿಭಟಿಸಲು ಮುಂದಾಗಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಜಮೀರ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಸಿದ್ಧವಾಗಿದೆ. ಸದನದಲ್ಲಿ ಇದು ಕೋಲಾಹಲಕ್ಕೂ ಕಾರಣವಾಗಬಹುದು.
ಡಿಕೆಶಿ ಪ್ರಕರಣ- ಸಿಬಿಐ ತನಿಖೆಗೆ ಅನುಮತಿ ವಾಪಸ್ ವಿಚಾರ:ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನೀಡಿದ್ದ ಸಿಬಿಐ ತನಿಖಾ ಅನುಮತಿಯನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸದನ ಸಮರ ಸಾರುವ ಸಾಧ್ಯತೆಯೂ ಇದೆ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ಅನುಮತಿ ವಾಪಸ್ ಪಡೆದುಕೊಂಡಿದೆ ಎಂಬುದು ವಿರೋಧ ಪಕ್ಷಗಳ ಆರೋಪ. ಸದನದಲ್ಲಿ ಈ ವಿಚಾರ ಸದ್ದು ಗದ್ದಲಕ್ಕೆ ಕಾರಣವಾಗಬಹುದು.
ಗ್ಯಾರಂಟಿ ಜಾರಿ ವೈಫಲ್ಯ, ಅನುದಾನ ಕೊರತೆ:ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಜಾರಿಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸದನದಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ರಾಜ್ಯದ ಹಲವು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಸಿಗದೇ ಇರುವ ಬಗ್ಗೆ ಸರ್ಕಾರಕ್ಕೆ ಛಾಟಿ ಬೀಸುವ ಸಾಧ್ಯತೆ ಇದೆ. ಗ್ಯಾರಂಟಿ ಹಿನ್ನೆಲೆಯಲ್ಲಿ ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳು ಹಿನ್ನಡೆಯಾಗಿದೆ ಎಂದು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಪ್ರತಿಪಕ್ಷಗಳ ಅಸ್ತ್ರಕ್ಕೆ ಸರ್ಕಾರದ ಪ್ರತ್ಯಾಸ್ತ್ರ:ಆಡಳಿತಾರೂಢ ಕಾಂಗ್ರೆಸ್ ಕೂಡ ಪ್ರತಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಸಿದ್ಧಗೊಳಿಸಿದೆ. ಪ್ರತಿಪಕ್ಷಗಳ ಆರೋಪಗಳಿಗೆ ಬಲವಾದ ಕೌಂಟರ್ ಕೊಡಲು ಸಜ್ಜಾಗಿದೆ. ಈಗಾಗಲೇ ಬರ ನಿರ್ವಹಣೆ ಸಂಬಂಧ ಸಿಎಂ ಸಿದ್ದರಾಮಯ್ಯ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ತಲಾ 2,000 ರೂ. ನೀಡಲು ನಿರ್ಧರಿಸಿದ್ದಾರೆ. ಆ ಮೂಲಕ ಪ್ರತಿಪಕ್ಷಗಳ ಸದನ ಅಸ್ತ್ರಕ್ಕೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬರುವತನಕ ರೈತರಿಗೆ ಕನಿಷ್ಠ 1,000 ದಿಂದ ಗರಿಷ್ಠ 2,000 ರೂ. ಬೆಳೆ ನಷ್ಟ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿಪಕ್ಷಗಳ ಬರ ಟೀಕೆಗೆ ಸರ್ಕಾರ ಇದನ್ನು ಕೌಂಟರಾಗಿ ಬಳಸಲಿದೆ.
ಬರ ಪರಿಹಾರ ನೀಡದೇ ಇರುವ ಕೇಂದ್ರ ಸರ್ಕಾರದ ವಿರುದ್ಧವೇ ಬಿಜೆಪಿಯ ಬರ ಅಸ್ತ್ರವನ್ನು ತಿರುಗು ಬಾಣವಾಗಿ ಬಳಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಬರ ಪರಿಹಾರಕ್ಕೆ ಮೆಮರಾಂಡಂ ನೀಡಿ ತಿಂಗಳು ಕಳೆದಿದ್ದರೂ ಕೇಂದ್ರ ಸರ್ಕಾರ ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ. ಆ ಮೂಲಕ ಮೋದಿ ಸರ್ಕಾರ ಕರ್ನಾಟಕದ ಪರ ನಿರ್ಲಕ್ಷ್ಯ ತೋರುತ್ತಿದೆ ಎಂದು ಬಿಜೆಪಿ ವಿರುದ್ಧವೇ ಟೀಕಾಸ್ತ್ರ ಬಳಸಲಿದೆ. 25 ಬಿಜೆಪಿ ಸಂಸದರು ರಾಜ್ಯದ ಪರ ಕೇಂದ್ರ ಸರ್ಕಾರದ ಬಳಿ ಬರ ಪರಿಹಾರ ಬಿಡುಗಡೆಗೆ ಒತ್ತಡ ಹೇರುತ್ತಿಲ್ಲ. ಈಗಾಗಲೇ ಸಿಎಂ ಸೇರಿ ನಮ್ಮ ಸಚಿವರಿಗೆ ಕೇಂದ್ರ ಸಚಿವರು ಭೇಟಿಗೆ ಸಮಯ ನೀಡಿಲ್ಲ ಎಂದು ಬಿಜೆಪಿಯನ್ನೇ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಗೋಚರಿಸಿದೆ.
ಪಂಚ ಗ್ಯಾರಂಟಿ ಅನುಷ್ಠಾನದ ಬಗ್ಗೆ ಅಂಕಿಅಂಶ ಸಮೇತವಾಗಿ ಮಾಹಿತಿ ನೀಡಲು ಸರ್ಕಾರ ಮುಂದಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಯ ವಿವರ ನೀಡುವ ಮೂಲಕ ಪ್ರತಿಪಕ್ಷಗಳ ಆರೋಪಕ್ಕೆ ಎದುರೇಟು ನೀಡುವ ತಂತ್ರ ಹೆಣೆದಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಚಳಿಗೆ ನಡುಗಿದ ಪೊಲೀಸರು, ಜರ್ಮನ್ ಟೆಂಟ್ನಲ್ಲಿ ಹೇಗಿದೆ ವ್ಯವಸ್ಥೆ?